ಜಿಲ್ಲೆ

ಭತ್ತ ನಾಟಿ ಮಾಡಿದ ವಿದ್ಯಾರ್ಥಿಗಳು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಮುಂಡಗೋಡ: ನೋಡಿ ಕಲಿ ಮಾಡಿ ತಿಳಿ ಎನ್ನುವ ಶೈಕ್ಷಣಿಕ ತತ್ವದ ಪಾಠ ಮಾಡುವ ಉದ್ದೇಶದಿಂದ ತಾಲೂಕಿನ ಕುರ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ಎದುರಿನ ಗದ್ದೆಯಲ್ಲಿ ಇತ್ತೀಚೆಗೆ ಭತ್ತದ ನಾಟಿ ಮಾಡಿಸುವ ಮೂಲಕ ಕೃಷಿ ಬಗ್ಗೆ ಮಾಹಿತಿ ನೀಡಲಾಯಿತು.

ಪಾಠ, ಆಟದ ಜತೆಗೆ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆಯೂ ಮಾಹಿತಿ ನೀಡುವ ಉದ್ದೇಶದಿಂದ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯವರ ಒಪ್ಪಿಗೆ ಮೇರೆಗೆ ಕೆಲ ಸಮಯ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಮಾಡಿಸಲು ನಿರ್ಧರಿಸಿದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೆಸರು ಗದ್ದೆಯತ್ತ ಹೆಜ್ಜೆ ಹಾಕಿ ಕೃಷಿ ಬಗ್ಗೆ ಮಾಹಿತಿ ಪಡೆದು, ಸ್ವತಃ ಗದ್ದೆಗೆ ಇಳಿದು ಭತ್ತದ ಸಸಿಗಳನ್ನು ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತ ಮುಂದೆ ಸಾಗಿದರು.

ಕೃಷಿ ಪ್ರಧಾನವಾದ ದೇಶದಲ್ಲಿ ಇಂದಿನ ಪೀಳಿಗೆ ಕೃಷಿ ಚಟುವಟಿಕೆಯಿಂದ ದೂರವಾಗಬಾರದು. ವೈಜ್ಞಾನಿಕ ವಿಧಾನದ ಮೂಲಕ ಕೃಷಿ ಚಟುವಟಿಕೆಯನ್ನು ಮುಂದುವರೆಸುತ್ತ, ಕೃಷಿಯೂ ಕೂಡ ಒಂದು ಗೌರವಾನ್ವಿತ ಉದ್ಯೋಗ ಎಂದು ತಿಳಿಯುವುದು ಅಗತ್ಯವಾಗಿದೆ. ಕೃಷಿ ಮತ್ತು ಕೃಷಿಕರನ್ನು ಗೌರವದಿಂದ ನೋಡುವ ಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ಭತ್ತ ನಾಟಿ ಮಾಡುವ ಕಾರ್ಯವನ್ನು ನಡೆಸಲಾಯಿತು.