ಜಿಲ್ಲೆ

ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅನನ್ಯ

ಆರ್.ಕೃಷ್ಣ

ಮೈಸೂರು: ಕರ್ನಾಟಕ ಸೇನಾ ಪಡೆಯಿಂದ ಮೈಸೂರು ರಾಜ್ಯದ 22ನೇ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 225ನೇ ಜಯಂತಿ ಆಚರಿಸಲಾಯಿತು.
ನಗರದ ಮಹಾರಾಜ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ಒಡೆಯರ್ ಪುತ್ಥಳಿ ಬಳಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಲೇಖಕ ಬನ್ನೂರು ಕೆ. ರಾಜು ಮಾತನಾಡಿ, ನಿಜವಾದ ಪ್ರಜಾಪ್ರಭುತ್ವ ಇದ್ದದ್ದು ಮಹಾರಾಜರ ಆಳ್ವಿಕೆಯಲ್ಲಿ, ಅದರಲ್ಲೂ ವಿಶೇಷವಾಗಿ ಮೈಸೂರು ಸಂಸ್ಥಾನವನ್ನು ಆಳಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎಂದು ಬಣ್ಣಿಸಿದರು.
ಆದರೆ ಇಂದಿನ ಕಾಲಘಟ್ಟದಲ್ಲಿ ನಮ್ಮ ಪ್ರಭುಗಳು ಇಡೀ ರಾಜ್ಯವನ್ನು ಮತ್ತು ರಾಷ್ಟ್ರವನ್ನು ಅವರ ಸ್ವಾರ್ಥಕ್ಕಾಗಿ ಅಂಧಕಾರಕ್ಕೆ ತಳ್ಳುತ್ತಿದ್ದಾರೆ. ಹಾಗಾಗಿ ಇಡೀ ರಾಜ್ಯಕ್ಕೆ ಬೆಳಕನ್ನು ನೀಡಿದಂತಹ ನಮ್ಮ ರಾಜರು ಅವಿಸ್ಮರಣೀಯರು ಎಂದರು. ನಮ್ಮ ಈಗಿನ ಆಧುನಿಕ ಪ್ರಭುಗಳು ರಾಜ್ಯವನ್ನು ಸರಿಯಾಗಿ ಆಳದೇ ಅದನ್ನು ಬಿಟ್ಟು ಸ್ವಾರ್ಥದ ಹಾದಿಯಲ್ಲಿ ಮುನ್ನಡೆದರೆ ಪ್ರಜೆಗಳು ಕಷ್ಟಕ್ಕೆ ಸಿಲುಕಿ ಅಭಿವೃದ್ಧಿಯ ಕ್ಷಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇವತ್ತಿಗೂ ನಮ್ಮ ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜರು ಸ್ಮರಣೀಯರು ಎಂದರು.
ಮೈಸೂರಿನ ಅಭಿವೃದ್ಧಿಗೆ ಮುನ್ನುಡಿ ಬರೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕೊಡುಗೆಯಾಗಿ ನೀಡಿದ ಮಹಾಪುರುಷರು ಮುಮ್ಮಡಿ ಅವರು. ಮುಮ್ಮಡಿ ಅವರು ಧಾರ್ಮಿಕ, ಸಾಹಿತ್ಯಕ, ವೈಜ್ಞಾನಿಕ- ಹೀಗೆ ಎಲ್ಲ ಕ್ಷೇತ್ರಗಳಲ್ಲೂ ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದರು ಎಂದರು.
ವಿವಿಧ ರಂಗಗಳಿಗೆ ಒತ್ತು:
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ ಲೋಕೇಶ್‌ಗೌಡ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಮೈಸೂರು ರಾಜ್ಯಕ್ಕೆ ಅಪಾರ. ನಾಡನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಹಾರಾಜ, ಮಹಾರಾಣಿ, ಯುವರಾಜ ಕಾಲೇಜು ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಶಿಕ್ಷಣ, ಉದ್ಯೋಗ, ಕೃಷಿ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಚ್ಚಿನ ಒತ್ತು ಕೊಟ್ಟರು. ಇಂತಹ ಮಹನೀಯರ ಜಯಂತಿಯನ್ನು ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಪ್ರತಿ ವರ್ಷ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಅಧಿಕಾರ ದುರ್ಬಳಕೆ:
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ. ದೂರದೃಷ್ಟಿ ಹೊಂದಿದ್ದ ಮೈಸೂರು ರಾಜರ ಆಳ್ವಿಕೆ ಈಗಲೂ ಸಹ ಇದ್ದಿದ್ದರೆ ನಾವೆಲ್ಲ ಬಹಳ ಸಂತೋಷವಾಗಿರುತ್ತಿದ್ದೆವು. ಈಗ ಪ್ರಜಾಪ್ರಭುತ್ವ ಬಂದಮೇಲೆ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಜರ ಕಾಲದಲ್ಲಿ ನಾವಿರಬೇಕಿತ್ತು ಅಥವಾ ಈಗ ರಾಜರ ಆಳ್ವಿಕೆ ಇರಬೇಕಿತ್ತು ಎಂದು ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ.ಗಂಗಾಧರ್ ಸಿಹಿ ವಿತರಣೆ ಮಾಡಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ. ರಾಮು, ಹೋಟೆಲ್ ಸಂಘದ ಅಧ್ಯಕ್ಷ ಕೆ.ನಾರಾಯಣಗೌಡ, ಗೋಲ್ಡ್ ಸುರೇಶ್, ಕೃಷ್ಣಪ್ಪ, ಕುಮಾರ್ ಬಸಪ್ಪ ಗೌಡ, ಪ್ರಭುಶಂಕರ, ವರಕೂಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ವಿಜಯೇಂದ್ರ, ನೇಹಾ, ಭಾಗ್ಯಮ್ಮ, ಮಂಜುಳಾ, ಪ್ರಭಾಕರ್, ಹನುಮಂತಯ್ಯ, ರಾಧಾಕೃಷ್ಣ, ರಘು ಅರಸ್, ಸುಬ್ಬೇಗೌಡ, ರಮೇಶ್, ನಾಗರಾಜು ವಿಷ್ಣು ಇತರರು ಇದ್ದರು.