ಬೆಂ.ಗ್ರಾಮಾಂತರ
ಮುಂಬೈ ಟೂ ಹೊಸಹಳ್ಳಿ ತಾಂಡಾಗೆ ಕರೊನಾ ಸೋಂಕಿತರು ಟ್ರಾವೆಲ್ ಮಾಡುವ ಮೂಲಕ ಕರೊನಾಮುಕ್ತ ಜಿಲ್ಲೆಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಂಬೈ ನಂಜು ಅಂಟಿಕೊಂಡಿದೆ. ಜತೆಗೆ ಮತ್ತೆರಡು ಸ್ಥಳೀಯ ಪ್ರಕರಣಗಳು ಪತ್ತೆಯಾಗಿವೆ.
ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡಬಳ್ಳಾಪುರ ತಾಲೂಕು ಹೊಸಹಳ್ಳಿ ತಾಂಡಾದ 6 ಮಂದಿ ಮೇ 19ರಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ಬಂದಿದ್ದರು. ಅಲ್ಲಿಂದ ಆಟೋದಲ್ಲಿ ಗೌರಿಬಿದನೂರು-ದೊಡ್ಡಬಳ್ಳಾಪುರ ರಸ್ತೆ ಮೂಲಕ ಹೊಸಹಳ್ಳಿ ತಾಂಡಾಕ್ಕೆ ಬರಲು ಯತ್ನಿಸಿದ್ದರು. ದೊಡ್ಡಬಳ್ಳಾಪುರ ಗಡಿಯ ಗುಂಜೂರು ಚೆಕ್‌ಪೋಸ್ಟ್‌ನಲ್ಲಿ ಅವರನ್ನು ವಿಚಾರಿಸಿದಾಗ ಮುಂಬೈ ನಂಟು ಬೆಳಕಿಗೆ ಬಂದಿತ್ತು. ತಕ್ಷಣ ಅವರನ್ನು ಜಿಲ್ಲಾಡಳಿತ ಕ್ವಾರಂಟೈನ್‌ಗೆ ಒಳಪಡಿಸಿತ್ತು. 6 ಮಂದಿಯ ಗಂಟಲು ದ್ರವ ಪರೀಕ್ಷಿಸಿದಾಗ ಮೂವರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಉಳಿದವರನ್ನು ದೊಡ್ಡಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ನೆಲಮಂಗಲಕ್ಕೂ ವಕ್ಕರಿಸಿದ ಕರೊನಾ: ನೆಲಮಂಗಲ ತಾಲೂಕಿನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ವೀರಸಾಗರದ 55 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕರೊನಾ ದೃಢಪಟ್ಟಿದೆ.
ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 12 ಜನರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕುಂಟುಂಬದ ನಾಲ್ಕು ಮನೆಗಳನ್ನು ಸೀಲ್ ಮಾಡಲಾಗಿದ್ದು, ವೀರಸಾಗರವನ್ನು ಸೀಲ್‌ಡೌನ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸೋಂಕಿತ ಮಹಿಳೆ ನೆಲಮಂಗಲದ ದಾಬಸ್‌ಪೇಟೆ, ಶಿವಗಂಗೆ, ತುಮಕೂರಿನ ಊರ್ಡಿಗೆರೆ, ಬೈಚೇನಹಳ್ಳಿ ಮತ್ತಿತರ ಕಡೆ ತಿರುಗಾಡಿರುವ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೊಸಕೋಟೆಯಲ್ಲೂ ಪತ್ತೆ: ನಂದಗುಡಿ ಹೋಬಳಿ ಚಿಕ್ಕಕೊರಟಿ ಗ್ರಾಮದ 22 ವರ್ಷದ ಗರ್ಭಿಣಿಗೆ ಸೋಂಕು ತಗುಲಿದೆ. ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಕರೊನಾ ಪತ್ತೆಯಾಗಿದೆ. ಜಿಲ್ಲಾಡಳಿತ ಗರ್ಭಿಣಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದೆ. ಸೋಂಕಿತೆಯ ಪ್ರಾಥಮಿಕ ಸಂರ್ಪಕದಲ್ಲಿದ್ದ ಪತಿ, ಅತ್ತೆ ಮಾವನನ್ನು ಕ್ವಾರಂಟೈನ್ ಮಾಡಲಾಗಿದೆ. ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದ್ದು, ಅಗತ್ಯ ವಸ್ತು ಸೇವೆಗಾಗಿ ಸಹಾಯವಾಣಿ ತೆರೆದಿರುವುದಾಗಿ ತಹಸೀಲ್ದಾರ್ ಗೀತಾ ತಿಳಿಸಿದ್ದಾರೆ.
ಐವರೂ ಮಹಿಳೆಯರೇ: ದೊಡ್ಡಬಳ್ಳಾಪುರ ತಾಲೂಕಿನ ಮೂವರು ಮಹಿಳೆಯರು ಮಹಾರಾಷ್ಟ್ರ ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ನೆಲಮಂಗಲ ತಾಲೂಕಿನ ಮಹಿಳೆ, ಚಿಕ್ಕಕೊರಟಿ ಗ್ರಾಮದ ಗರ್ಭಿಣಿ ಸೋಂಕಿತರಾಗಿದ್ದಾರೆ. ಎಲ್ಲರನ್ನೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.