ಜಿಲ್ಲೆ

ಚಿಣ್ಣರ ಸಾಧನೆಗೆ ಮುನ್ನುಡಿ ಬರೆವ ಚಿಣ್ಣರ ಬಿಂಬ | Chinnara bimba

ನಾನು, ನಾನೇ, ನನ್ನಿಂದಲೇ ಎನ್ನುವ ಅಹಂಕಾರವು ಮನುಷ್ಯನೊಳಗಿರುವ ಅಜ್ಞಾನವೆಂಬ ದೊಡ್ಡ ಕತ್ತಲು. ಹೊರ ಕಣ್ಣನ್ನು ಬಿಟ್ಟಾಗ ಭೌತಿಕ ಜಗತ್ತಿನ ಎಲ್ಲವೂ ನಮಗೆ ಕಂಡರೆ ಒಳಗಿರುವ ಮನದ ಕಣ್ಣಿನಿಂದ ಕಂಡಾಗ ಎಲ್ಲದರ ನಿಜ ದರ್ಶನವಾಗುವುದು. ಇದು ತನ್ನನ್ನು ತಾನರಿಯುವ ಪರಿ ಅಷ್ಟೇ. ಜಗತ್ತಿನ ಒಳಿತುಗಳನ್ನೆಲ್ಲ ತನ್ನೊಳಗೆ ತಂದು ಅದನ್ನು ಜಗತ್ತಿಗೇ ಹಂಚುವುದು ನಮ್ಮ ನೆಲದ ಮನೋಭಾವ. ಇಲ್ಲಿರುವ ನಾನು ನೀನು ಹಾಗೂ ಜಗತ್ತು ಇವೆಲ್ಲವೂ ಶಕ್ತಿಯೇ. ಇವೆಲ್ಲವೂ ಅಹಂಕಾರವಾಗಿರದೇ ಜಗವನ್ನು ಬೆಳಗುವ ಶಕ್ತಿಯಾಗಿ ಮಾರ್ಪಡಿಸುವಾಗ ಮೊದಲು ತನ್ನನ್ನು, ನಂತರ ಸರ್ವರನ್ನು ಅರಿತು  ಒಟ್ಟಾಗಿ ಕಟ್ಟುವ ಕೆಲಸವಾಗುವುದು ಮುಖ್ಯ. ಇದರ ಫಲವೆಂದರೆ ಸಕಲರ ಒಳಿತು. ಈ ಪ್ರಯತ್ನದಲ್ಲಿ ಫಲ ಕಾಣುವುದು ಅಷ್ಟು ಸುಲಭವಲ್ಲ. ಇಂತಹ ಸುಲಭವಲ್ಲದ ಕೆಲಸವನ್ನು ಅತಿ ಸರಾಗವೆಂಬಂತೆ ಮಾಡಿ ತೋರಿಸಿದ ಹಿರಿಮೆ ಮುಂಬೈಯ ಕನ್ನಡಿಗರ ಮಹಾಸಂಸ್ಥೆಯಾದ ಚಿಣ್ಣರ ಬಿಂಬದ್ದು ಎನ್ನುವುದು ಕನ್ನಡಿಗರ ಅಭಿಮಾನದ ಸಂಗತಿ.  ನನ್ನೊಬ್ಬನಿಂದ ಜಗತ್ತು ಸುಂದರವಾಗಲಾರದು, ಅದಕ್ಕಾಗಿ ‘ನಾನು’ ಹಲವಾಗಿ, ಬಲವಾಗಿ ಗೆಲುವಿನ ಹಾದಿಯನ್ನು ಸುಗಮಗೊಳಿಸಬೇಕೆನ್ನುವ ವಿಕಾಸ ಮನೋಭಾವವನ್ನು ಸಾದೃಶ್ಯವಾಗಿಸಿದ ಹಿರಿಮೆ ಚಿಣ್ಣರ ಬಿಂಬ ( Chinnara bimba ) ಸಂಸ್ಥೆಯದು. ಸರ್ವೈವಲ್ ಫಾರ್ ದ ಫಿಟ್ಟೆಸ್ಟ್ ಎನ್ನುವ ಡಾರ್ವಿನ್ ಸಿದ್ದಾಂತಕ್ಕೆ  ಆರೋಗ್ಯಕರವಾದ ರೀತಿಯಲ್ಲಿ ಪೂರಕವೂ ಆದ ಮಾನಸಿಕ ವಿಕಾಸ ಕ್ರಮ‌ವನ್ನು ಚಿಣ್ಣರ ಬಿಂಬ ಅನುಸರಿಸುತ್ತ ಕನ್ನಡದ ಮುಂದಿನ ಪೀಳಿಗೆಯನ್ನು ತಯಾರು ಮಾಡುತ್ತಿದೆ.  

| ಕಲಾ ಭಾಗ್ವತ್

ಹೆಸರೇ ಹೇಳುವಂತೆ ಮಕ್ಕಳಿಗೆ ತನ್ನೊಳಗಿನ, ಬಿಂಬವನ್ನು, ತಾಯ್ನೆಲದ ಸೊಬಗನ್ನು ತಾನೇ ಅರಿತು ಭವಿಷ್ಯವನ್ನು ಸುಂದರಗೊಳಿಸಿಕೊಳ್ಳುವಲ್ಲಿ ಚಿಣ್ಣರ ಬಿಂಬ ಸಂಸ್ಥೆಯು ಸಹಕರಿಸುತ್ತದೆ. ಬಹು ಭಾಷೆ ಬಹು ಸಂಸ್ಕೃತಿಯ ಸ್ವರ ಸಮ್ಮೇಳದ ಮುಂಬೈ ನಗರದಲ್ಲಿ ಕನ್ನಡ ಸ್ವರವು ಗಟ್ಟಿಯಾಗಿ ಕೇಳುವಂತೆ ಮುಂದಿನ ತಲೆಮಾರನ್ನು ರೂಪಿಸುತ್ತಿದೆ.

ಇಂದಿನ ಮಕ್ಕಳ ಬೆಳವಣಿಗೆಗೆ  ಜನರ ಸಂಪರ್ಕ, ಮಾತು, ಆಟ, ಆರೋಗ್ಯಕರ ವಾತಾವರಣದ ಮನೆ ಹಾಗೂ ಸಮಾಜ ಇವು ಅತ್ಯಂತ ಪ್ರಮುಖವಾಗಿ ಇರಬೇಕಾದ ಅಂಶಗಳು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹಣ ಗಳಿಸುವುದೇ ಮುಖ್ಯಧ್ಯೇಯ ಎಂಬಂತೇ ಆಯಾ ವಿಷಯಗಳಲ್ಲಿ ವಿಶೇಷ ಪರಿಣಿತರಾಗಿ ಜಡ ಸಂವೇದನೆಯುಳ್ಳವರಾಗವುದಕ್ಕೆ ಎಲ್ಲ ಬಗೆಯ ವ್ಯವಸ್ಥೆಗಳಿವೆ. ಅದರಲ್ಲೂ ತಲೆಮಾರಿನವರು ತಾಯ್ನಾಡನ್ನು ಅನಿವಾರ್ಯವಾಗಿ ವೃತ್ತಿ ನಿಮಿತ್ತ ಬಿಟ್ಟು ಬಂದು ಮಕ್ಕಳ ಸುಂದರ ನಾಳೆಯ ಕನಸನ್ನು ಕಟ್ಟಿಕೊಂಡು ನಗರದ ಪೆಟ್ಟಿಗೆಯಂಥ ಮನೆಗಳಲ್ಲಿ ಇದ್ದು ಕಾಣುವ ಪುಟ್ಟ ಕನಸು ಸಾಕಾರವಾಗುವುದು ಮಕ್ಕಳ ಭವ್ಯ ಭವಿಷ್ಯದಿಂದಲೇ. ಹೀಗಿರುವಾಗ ನಮ್ಮ ಜನಗಳ ಜೀವನದಲ್ಲಿ ಜ್ಯೋತಿ ಬೆಳಗುವ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ಇತ್ಯಾದಿಗಳನ್ನು ಅರಿತು ಸೌಜನ್ಯದಿಂದ, ಸಂಬಂಧಗಳನ್ನು ರೂಪಿಸಿಕೊಳ್ಳುವ ವಿಧಾನವನ್ನು ಹೇಳಿಕೊಡುವ ಚಿಣ್ಣರ ಬಿಂಬ ಸಂಸ್ಥೆಯು ಮುಂಬೈ ಕನ್ನಡಿಗರ ಪಾಲಿಗೆ ವರದಾನವಾಗಿದೆ.

ದಕ್ಷ ಪೊಲೀಸ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡ ಚಿಣ್ಣರ ಬಿಂಬದ ರೂವಾರಿ, ಶಿಸ್ತಿನ ನಾಯಕ ಪ್ರಕಾಶ್ ಭಂಡಾರಿ ಅವರು ಕರ್ನಾಟಕ ಸರ್ಕಾರವು ಮಾಡಬೇಕಾದ ಕೆಲಸದ ಒಂದು ಭಾಗ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಂತೆ ತನ್ನ ಕುಟುಂಬ ಹಾಗೂ ಹಲವರ ಸಹಯೋಗದೊಂದಿಗೆ ಪಣ ತೊಟ್ಟವರಂತೆ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಮುಂಬೈಯಲ್ಲಿ ಜಾತಿ ಮತ ಭೇದವೆಣಿಸದೇ ಏಳರಿಂದ ಹದಿನಾಲ್ಕು ವರ್ಷ ವಯಸ್ಸಿನ ಮಕ್ಕಳಲ್ಲಿ ಪ್ರತಿಭೆಯನ್ನು ಉದ್ದೀಪಿಸಿ ಸಾಕಾರಗೊಳಿಸುವ ಸಕಲವನ್ನೂ ಇಲ್ಲಿ ಹೇಳಿಕೊಡಲಾಗುವುದು. ಇಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಪ್ರಾಶಸ್ತ್ಯವೇ ವಿನಃ ಒಂದು, ಎರಡು, ಮೂರು ಸ್ಥಾನಗಳನ್ನು ಪಡೆದವರು ಹಿಗ್ಗಿ, ಪಡೆಯದಿರುವವರು ಕುಗ್ಗಿ ಹೋಗುವುದಲ್ಲ. ಇನ್ನಷ್ಟು ಸುಧಾರಣೆಯೊಂದಿಗೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಮತ್ತೆ ಮತ್ತೆ ಪಾಲ್ಗೊಳ್ಳುವುದು, ಹೀಗೆಯೇ ಹೊಳಪನ್ನು ಪಡೆಯುವುದು. ತಮ್ಮಲ್ಲಿರುವ ಪ್ರತಿಭೆಯನ್ನು ಅಳುಕದೆ ಬಳುಕದೆ ಧೈರ್ಯದಿಂದ ಪ್ರದರ್ಶಿಸುವುದರಲ್ಲಿ ಇಲ್ಲಿನ ಮಕ್ಕಳು ಸದಾ ಸಿದ್ಧರು. ಇಲ್ಲಿ ಬರುವ ಮಾಮಾ ಮಾಮಿಗಳೆಲ್ಲರೂ ಮುಖವಾಡ ಕಳೆಚಿಟ್ಟ ನಿಜ ಜೀವನದ ನೈಜ ಪಾತ್ರಧಾರಿಗಳು. ಇಲ್ಲಿನ ಮುಖಂಡರು ಶಿಕ್ಷಕರು ಪಾಲಕರಿಗೆಲ್ಲ ಕನ್ನಡದ ಮಕ್ಕಳ ಸರ್ವಾಂಗೀಣ ಪ್ರಗತಿ ಉನ್ನತಿ ಮುಖ್ಯವೇ ಹೊರತು ಯಾವುದೇ ಪ್ರಚಾರ ಪುರಸ್ಕಾರಗಳಲ್ಲ.

ಚಿಣ್ಣರ ಬಿಂಬ ನಡೆಸುವ ಕಾರ್ಯಕ್ರಮಗಳಿಗೆ ಹೋಗಿ ಕುಳಿತರೆ ನಮ್ಮೊಳಗೆ ಒಂದು ಅಖಂಡ ಆಧ್ಯಾತ್ಮ ಏರ್ಪಡುತ್ತದೆ. ಮಕ್ಕಳೆಲ್ಲ ಅತಿ ಉತ್ಸಾಹದಿಂದ ಕುಳಿತಲ್ಲೇ ಚಪ್ಪಾಳೆ ಬಡಿಯುತ್ತ, ತಂತಾನೇ ಮುಖಾಭಿನಯಿಸುತ್ತ, ಕೈತಾಳ ಹಾಕುತ್ತಾ, ಕುಳಿತಿರುತ್ತಾರೆ. ಪ್ರೇಕ್ಷಕರಾಗಿ ಕುಳಿತಲ್ಲೇ ತುಸು ಬಿಡುವು ಸಿಕ್ಕರೆ ತಮ್ಮದೇ ಆದ ಮೌನ ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗೊಮ್ಮೆ ಮಾತಿನಾಟದ ಗಿಜಿ ಗಿಜಿ ಆರಂಭವಾಯಿತೆಂದರೆ ಶ್..ಮಾತನಾಡಬೇಡಿ ಎನ್ನುವ ಸಿಗ್ನಲ್. ಥಟ್ಟನೆ ಒಮ್ಮೆ ಅತ್ತ ದಿಟ್ಟಿಸಿ ಪುನಃ ಶಿಸ್ತಾಗಿ ಕುಳಿತು ನೋಡುವ ಚಿಣ್ಣರಿಗೆ ಅಷ್ಟು ಹೊತ್ತು ಒಂದು ಕಡೆ ಚಿತ್ತವಿಟ್ಟು ಕೇಳುವ ವ್ಯವಧಾನವನ್ನು ಕಲಿಸಿದವರ್ಯಾರೋ! ಚಿಣ್ಣರ ಬಿಂಬವೆಂಬ ಗುರುವಿನ ಅರಿವಿನ ಪ್ರಭಾವಳಿಯು ನಮ್ಮ ಕನ್ನಡತನವನ್ನು ದೇದೀಪ್ಯಮಾನಗೊಳಿಸುವ ನಿಜ ಬೆಳಕು ಎಂದರೆ ಅತಿಶಯೋಕ್ತಿಯಾಗಲಾರದು. ಇಷ್ಟು ಮಕ್ಕಳ ಒಕ್ಕೊರಲಿನ ಕನ್ನಡ ಉಲಿಯಿಂದ ಹೊಮ್ಮುವ ಧನಾತ್ಮಕ ಕನ್ನಡತನವು ಮುಂಬೈ ನೆಲದ ಭಾವ ಸಾಗರದಲ್ಲಿ ಕನ್ನಡದ ಹೊಸ ಅಲೆಯನ್ನು ಎಬ್ಬಿಸುವುದು ಸುಳ್ಳಲ್ಲ. ಎಷ್ಟೇ ದೊಡ್ಡ ಕಾರ್ಯಕ್ರಮವಾಗಿರಲಿ ಎಲ್ಲಿಯೂ ಒಂದು ನಿಮಿಷವೂ ವ್ಯರ್ಥವಾಗಲು ಬಿಡದೆ ಅತ್ಯಂತ ಅಚ್ಚುಕಟ್ಟಾಗಿ ಉತ್ತಮ ರೀತಿಯಲ್ಲಿ ನಡೆಸುವ ಚಿಣ್ಣರ ಬಿಂಬ ಕಾರ್ಯ ವೈಖರಿಯು ಹಲವು ರೀತಿಯಲ್ಲಿ ಮಾದರಿಯಾಗಿದೆ. ಹಾಳೆ ನೋಡದೆಯೇ ತಪ್ಪಿಲ್ಲದೇ ಎಲ್ಲ ಗಣ್ಯರನ್ನೂ ಮಾಮಾ ಮಾಮಿ ಎಂದು ಪರಿಚಯಿಸಿ ಹೂ ಕೊಟ್ಟು ಶಾಲು ಹೊದಿಸಿ ಕಾಲು ಮುಟ್ಟಿ ನಮಸ್ಕರಿಸಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸುವ ಈ ಚಿಣ್ಣರ ಚಟುವಟಿಕೆಗೆ ಸಾಟಿಯಿಲ್ಲ. ಇವರು ತಾಳ ಹಾಕುತ್ತಾ ಹಾಡುವ ಭಜನೆ ಎಂದರೆ  ದೇವರೊಡನೆ ದೇವರು ನಡೆಸುವ ಸಂವಾದ.  ಪುಟ್ಟ ಮುಂಬೈ ಮಕ್ಕಳು ಪಟ ಪಟನೆ ಸ್ಪಷ್ಟವಾಗಿ ಕನ್ನಡ ಮಾತನಾಡುವಾಗ ಗಂಭೀರವಾಗಿ ಕುಳಿತು ಕೇಳುವ ರೂವಾರಿಗಳ ಮನದಾನಂದವು ಹೇಳದೆಯೇ ಹೊರ ಹೊಮ್ಮುತ್ತದೆ.

2003ರಲ್ಲಿ ಐವತ್ತು ಮಕ್ಕಳಿಂದ ಆರಂಭವಾಗಿ ಸರಿಯಾಗಿ 22 ವರ್ಷಗಳನ್ನು ಪೂರೈಸಿದ ಚಿಣ್ಣರ ಬಿಂಬವು ಮಧ್ಯ, ನೈರುತ್ಯ, ಈಶಾನ್ಯ ವಲಯಗಳೆಂಬ ಮೂರು ಮುಖ್ಯ ಭಾಗಗಳಡಿಯಲ್ಲಿ ಬರುವ ಹಲವು ಶಾಖೆಗಳ ಮೂಲಕ ಇಡೀ ಮುಂಬೈ ವಲಯದ ಏಳು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಜಾತಿ ಮತ ಭಾಷೆಗಳ ಭೇದವಿಲ್ಲದೆ ಒಗ್ಗೂಡಿಸಿದೆ. ಇಲ್ಲಿ ಮಕ್ಕಳಿಗೆ ಕನ್ನಡ ಓದು, ಬರವಣಿಗೆ, ಭಾಷಣ, ಚರ್ಚೆ, ಹಾಡು, ನಾಟಕ, ನೃತ್ಯ ಇತ್ಯಾದಿ ಕಲೆಗಳನ್ನು ಕಲಿಸಿಕೊಡುವ ನುರಿತ ತರಬೇತುದಾರರಿದ್ದಾರೆ. ಮಕ್ಕಳ ಪಾಲಕರೂ ಅಷ್ಟೇ ಮಕ್ಕಳನ್ನು ಅತ್ಯಂತ ಉತ್ಸಾಹದಿಂದ ಪ್ರತೀವಾರವೂ ತಪ್ಫದೇ ಶಿಬಿರಕ್ಕೆ ಕರೆತರುತ್ತಾರೆ. ಮನೆಯ ನಾಲ್ಕು ಗೋಡೆಗಳ ನಡುವೆ ಮೊಬೈಲ್ ಹಿಡಿದು ತಲೆತಗ್ಗಿಸಿ ಕೂರುವ ಮಹಾ ನಗರದ ಮಕ್ಕಳನ್ನು ಎಬ್ಬಿಸಿ ಶಿಬಿರಕ್ಕೆ ಹಾಜರಾಗುವಂತೆ ಮಾಡಲು ಕಾರಣ ಚಿಣ್ಣರ ಬಿಂಬ ಉಳಿಸಿಕೊಂಡ ವಿಶ್ವಾಸವಲ್ಲದೆ ಮತ್ತೇನೂ ಅಲ್ಲ. ಶುಲ್ಕವಿಲ್ಲದೆಯೇ ಎಲ್ಲವನ್ನೂ ಕಲಿಯುವ ಮಕ್ಕಳು ಇಲ್ಲಿ ಮುಕ್ತ ಹಕ್ಕಿಗಳಂತೆ ಕಾಣುತ್ತಾರೆ. ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಾಗ ಸಭಾಕಂಪನವೆಂಬುದು ಇವರ ಬಳಿಗೂ ಸುಳಿಯುವುದಿಲ್ಲ. ಅಷ್ಟು ಮಜಬೂತಾದ ಬುದ್ಧಿ ಮನಸ್ಸುಗಳನ್ನು ಇಲ್ಲಿ ರೂಪಿಸಲಾಗುತ್ತದೆ. ಇದು ಕೇವಲ ಯಾರನ್ನೋ ಮೆಚ್ಚಿಸುವ ಅಥವಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸ್ವಾರ್ಥವಲ್ಲ. ಬದಲಾಗಿ ಒಂದು ದಕ್ಷ ನಾಯಕತ್ವದ ನೆರಳಿನಲ್ಲಿ ಮಣ್ಣಿನ ಮುದ್ದೆಯಂತಿರುವ ಮಗುವಿಗೆ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಆಡಳಿತ ಮಂಡಳಿಯವರು ಎಲ್ಲರೂ ಒಟ್ಟಾಗಿ ಕನ್ನಡ ಸಂಸ್ಕಾರದೊಂದಿಗೆ ವ್ಯಕ್ತಿತ್ವ ವಿಕಸನದ ಹೊಸ ರೂಪವನ್ನು ಕೊಡುವ ಸೇವಾ ಮನೋಭಾವ.

ಹಳದಿ ಕೆಂಪು ಕನ್ನಡ ಬಾವುಟ ಬಣ್ಣದ ಉಡುಗೆ ತೊಟ್ಟು, ಹುಡುಗರು ಬಿಳಿಯಂಗಿ, ಪಂಚೆ, ಶಾಲು ತೊಟ್ಟು  ಚಿನ್ನದಂತೆ ಕನ್ನಡದ  ಚೆಲುವನ್ನು  ಹೆಚ್ಚಿಸುವ ಚಿಣ್ಣರು ನಮ್ಮ ಕನ್ನಡ ನಾಡಿನ ನಿಜವಾದ ನಿಧಿಗಳು. ಇಲ್ಲಿ ಕಲಿತವರು ಇಂದು ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದಷ್ಟೇ ಅಲ್ಲ ಉತ್ತಮ ನಾಗರಿಕರಾಗಿ ಮುನ್ನಡೆಯುತ್ತಿದ್ದಾರೆ. ಕರ್ನಾಟಕ ಸರ್ಕಾರದ ಯಾವುದೇ ಅನುದಾನವಿಲ್ಲದೆ, ತನ್ನದೇ ಆದ ಸ್ವಂತ ಸೂರಿಲ್ಲದೇ ಮುಂಬೈ ದಾನಿಗಳ ಸಹಾಯ ಸಹಕಾರದಿಂದಲೇ ನಡೆಸುತ್ತಿರುವ ಚಿಣ್ಣರ ಬಿಂಬದಂತಹ ಸಂಸ್ಥೆ ಹೊರನಾಡಿನ ಯುವ ಪೀಳಿಗೆಯಲ್ಲಿ ಕನ್ನಡತನವನ್ನು ಬಿತ್ತಿ ಬೆಳೆಯುವ ಮಹತ್ಕಾರ್ಯವನ್ನು ಮಾಡುತ್ತಿದೆ ಎನ್ನುವುದು ಕನ್ನಡಿಗರ ಭಾಗ್ಯವೇ ಸರಿ.