raichur 
ಜಿಲ್ಲೆ

ಪಾಲಿಕೆಯಿಂದ ಬಹುಭಾಷಾ ಕವಿಗೋಷ್ಠಿ *ಕಾವ್ಯ ಶಕ್ತಿಯುತವಾದ ಅನುಭವದಿಂದ ವಾಸ್ತವಿಕತೆ ಹೊಂದಬೇಕು-ಸಾಲಿಮಠ ಸಲಹೆ

ರಾಯಚೂರು ವಿಶಾಲವಾಗಿರುವುದನ್ನು ಸಂಕ್ಷಿಪ್ತ ಸಾಲುಗಳಲ್ಲಿ ಹಿಡಿಯುವುದೆ ಕಾವ್ಯ.ಕವನ ರೂಪ ಯಾವದೇ ಆಗಿರಲಿ. ಕಾವ್ಯ ಶಕ್ತಿಯುತವಾದ ಅನುಭವದಿಂದ ವಾಸ್ತವಿಕತೆ ಹೊಂದಿರುವಂತಿರಬೇಕೆಂದು ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿಮಠ ಹೇಳಿದರು.

ನಗರದ ಮೆಕ್ಕದರ್ವಾಜ ಆವರಣದಲ್ಲಿ ಮಹಾನಗರ ಪಾಲಿಕೆ ಮತ್ತು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ಜಂಟಿಯಾಗಿಆಯೋಜಿಸಿದ್ದ ನಾಡಹಬ್ಬ ದಸರಾ-2025 ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನುಭವ ಮನಸ್ಸಿನ ಅದ್ಭುತ ಭಾವನೆ, ರೂಪದೊಂದಿಗೆ ವಾಸ್ತವಿಕ ನೆಲಗಟ್ಟಿನ ಮೇಲೆ ಹೊರ ಹೊಮ್ಮುವ ಸಾಲು ಗಳು ಕಾವ್ಯವೆನಿಸಿಕೊಳ್ಳುತ್ತವೆ. ಹೆಚ್ಚಿನ ಅದ್ಯಾಯ, ಅನುಭವ, ವಿಚಾರ ಜೀವನದಲ್ಲಿ ಅರಗಿಸಿಕೊಳ್ಳುವವರಿಂದ ಉತ್ತಮ ಕವಿಯಾಗಲು ಸಾಧ್ಯವಾಗುತ್ತದೆ ಎಂದರು.

ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ಕೋಟೆ ರಕ್ಷಣೆಯಲ್ಲಿ ಉತ್ತಮ ಕಾರ್ಯ ನಡೆಸಿದ್ದಾರೆ. ದಸರಾ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮ ನಿರಂತರವಾಗಿ ನಡೆಸಲಾಗುತ್ತಿದೆ. ರಾಜ್ಯದ ಸಾಹಿತ್ಯಕ್ಕೆ ರಾಯಚೂರು ಅನೇಕ ಕೊಡುಗೆ ನೀಡಿದೆ. ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಎಲ್ಲರನು ಸ್ಮರಿಸಲು ಈ ರೀತಿಯ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.

ಕವಿ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ನೂತನ ಸಾಹಿತಿಗಳಿಗೆ ಚೈತನ್ಯ ಅಗತ್ಯ. ಹೆಚ್ಚಿನ ಸಂಶೋಧನೆ, ಅಧ್ಯಾಯನ ಆಗತ್ಯ. ಸಾಮಾಜಿಕ ಜಾಲತಾಣ ಯುವಕರಲ್ಲಿ ಸಾಹಿತ್ಯ ಆಸಕ್ತಿಗೆ ಕಡಿವಾಣ ಹಾಕಿದೆ. ಸಾಹಿತ್ಯದ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಿಗಿರಿ,ಉಪಾಧ್ಯಕ್ಷ ಸಾಜೀದ್ ಸಮೀರ್, ಕೋಟೆ ಅಧ್ಯಯನ ಸಮಿತಿಯ ಗೌರವಾಧ್ಯಕ್ಷ ಜಯಣ್ಣ, ಕೋಟೆ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಸತ್ಯನಾರಾಯಣ, ಉಪ ಆಯುಕ್ತೆ ಸಂತೋಷಿ ರಾಣಿ, ಉರ್ದು ಕವಿ ಡಾ.ಇಫೆಕಾರ್ ಶಕೀಲ್, ಎಚ್.ಎಚ್.ಮ್ಯಾದರ್ ಸೇರಿ ಅನೇಕರು ಇದ್ದರು.