ಜಿಲ್ಲೆ

ಭಾಷೆ ಉಳಿಸಿ, ಬೆಳೆಸದಿದ್ದಲ್ಲಿ ಸಂಸ್ಕೃತಿಯ ಅವನತಿ...

ನಾಡೋಜ ಪ್ರೊ. ಕೆ.ಪಿ. ರಾವ್​ ಅಭಿಮತ

ಮಣಿಪಾಲದಲ್ಲಿ ಬಹು ಭಾಷಾ ಕವಿಗೋಷ್ಠಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾಷೆಗಳನ್ನು ಉಳಿಸಿ ಬೆಳೆಸಬೇಕು. ಇಲ್ಲವಾದಲ್ಲಿ ಭಾಷೆಯೊಂದಿಗೆ ಅದರ ಅಪೂರ್ವ ಸಂಸ್ಕೃತಿಯೂ ಸಹ ಅವನತಿಯಾಗುವ ಸಂಭವವಿರುತ್ತದೆ. ಭಾಷೆಯನ್ನು ಬೆಳೆಸದ ಪರಿಣಾಮವಾಗಿ ನಮ್ಮ ದೇಶದ ಹಲವಾರು ಭಾಷೆಗಳು ಅವನತಿಯ ಹಾದಿಯಲ್ಲಿರುವುದು ದು:ಖದ ವಿಷಯ ಎಂದು ಭಾಷಾತಜ್ಞ, ನಾಡೋಜ ಪ್ರೊ. ಕೆ.ಪಿ. ರಾವ್​ ಹೇಳಿದರು.

ಮಣಿಪಾಲದ ಸಮುದಾಯ ಬಾನುಲಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕ ಏ.10ರಂದು ಆಯೋಜಿಸಿದ್ದ ವಿಷುಕಣಿ-ಕವಿದನಿ ಎಂಬ ಬಹು ಭಾಷಾ ಕವಿಗೋಷ್ಠಿಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಪೂರ್ವ ಅವಕಾಶ

ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲದ ಎಂಐಸಿ ನಿರ್ದೇಶಕಿ ಡಾ. ಶುಭಾ ಎಚ್​.ಎಸ್​. ಮಾತನಾಡಿ, ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವಿದೆ. ಹೀಗಾಗಿ ಕವಿತೆಗಳಿಗೆ ವಿಮರ್ಶೆಯ ಅವಶ್ಯಕತೆ ಎದುರಾಗುವುದಿಲ್ಲ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮಲ್ಲಿರುವ ಸಂಸ್ಕೃತಿ, ಆಚಾರಗಳನ್ನು ಕವನಗಳ ಮೂಲಕ ಪ್ರಚುರಪಡಿಸಲು ಅಪೂರ್ವ ಅವಕಾಶ ಸಿಕ್ಕಿರುವುದು ಸಂತಸದ ವಿಚಾರ ಎಂದರು.

ಕವಿಗೋಷ್ಠಿಯ ಸಮನ್ವಯಕಾರರಾಗಿ ಪಾಲ್ಗೊಂಡಿದ್ದ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ, ಕವನಗಳು ಹುಟ್ಟುವ ಬಗ್ಗೆ, ಅದನ್ನು ಮತ್ತಷ್ಟು ಆಕರ್ಷಕವಾಗಿ ಬರೆಯುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ರವಿರಾಜ ಎಚ್​.ಪಿ., ಕಸಾಪ ಜಿಲ್ಲಾ ಮಾಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ ಉಪಸ್ಥಿತರಿದ್ದರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ರೇಡಿಯೊ ಮಣಿಪಾಲದ ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ಅಮ್ಮೆಂಬಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಲೋಚನಾ ಪಚ್ಚಿನಡ್ಕ ಹಾಗೂ ವಸುಧಾ ಅಡಿಗ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್​ ವಂದಿಸಿದರು.

ಸ್ವರಚಿತ ಕವನ ವಾಚನ

ಕವಿಗಳಾದ ಕವಿತಾ ಎಸ್​. ಮಣಿಪಾಲ (ಹವ್ಯಕ ಕನ್ನಡ), ವೈಷ್ಣವಿ ಎಸ್​. ರಾವ್​ (ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ (ಕನ್ನಡ), ಮಾಲತಿ ಆರ್​. ಭಂಡಾರಿ ಕೆಮ್ಮಣ್ಣು (ತುಳು), ಕೆ. ವಾಣಿಶ್ರೀ ಐತಾಳ (ತೆಲುಗು), ಪ್ರಣತಿ ಪಿ. ಭಟ್​ ಮಣಿಪಾಲ (ಹಿಂದಿ), ವಿನೋದ ಪಡುಬಿದ್ರಿ (ತುಳು), ವಿಜಯಲಕ್ಷ್ಮೀ ಆರ್​. ಕಾಮತ (ಕೊಂಕಣಿ), ಮನೋಹರ ಶೆಟ್ಟಿ ಬಿದ್ಕಲ್​ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ (ಮಲಯಾಳಂ), ವಸುಧಾ ಅಡಿಗ ನೀಲಾವರ (ಕನ್ನಡ), ಲಲಿತಾ ಪಿ. ಭಟ್​ (ಕನ್ನಡ) ಮಂಜುನಾಥ ಮರವಂತೆ (ಕುಂದಾಪ್ರ ಕನ್ನಡ), ಸುಲೋಚನಾ ಪಚ್ಚಿನಡ್ಕ (ತುಳು), ನೀಮಾ ಲೋಬೊ ಶಂಕರಪುರ (ಕೊಂಕಣಿ), ಪುಂಡಲೀಕ ನಾಯಕ ಬೈಂದೂರು ಸ್ವರಚಿತ ಕವನ ವಾಚಿಸಿದರು.

ಮಣಿಪಾಲದ ಸಮುದಾಯ ಬಾನುಲಿ ರೇಡಿಯೊ ಕೇಂದ್ರ ಮತ್ತು ಕಸಾಪ ಉಡುಪಿ ತಾಲೂಕು ಟಕ ನಿರಂತರವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾರೆ. ವಿನೂತನ ರೀತಿಯಲ್ಲಿ ಅವನ್ನು ಆಯೋಜಿಸುವ ಮೂಲಕ ರಾಜ್ಯದಲ್ಲಿ ಮಾದರಿಯಾಗಿದ್ದಾರೆ. | ಪೂರ್ಣಿಮಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ