ವಿಜಯವಾಣಿ ಸುದ್ದಿಜಾಲ ಧಾರವಾಡ
ಹೆಗ್ಗೋಡಿನಂತಹ ಗ್ರಾಮದಲ್ಲೇ ನೆಲೆಸಿ ನೀನಾಸಂ ಎಂಬ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿ ಒಬ್ಬ ಸಮರ್ಥ ಸಂಘಟಕರಾಗಿ ಬೆಳಗಿದ ಕೆ.ವಿ.ಸುಬ್ಬಣ್ಣನವರ ಸಾಧನೆಗಳು ತರುಣ ಜನಾಂಗಕ್ಕೆ ಆದರ್ಶ. ಸುಬ್ಬಣ್ಣನವರು ಬಹುಮುಖಿ ಸಾಧಕರಾಗಿದ್ದರು ಎಂದು ಲೇಖಕ ಡಾ. ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯಪಟ್ಟರು.
ಕೆ.ವಿ. ಸುಬ್ಬಣ್ಣನವರ ಜನ್ಮದಿನ ನಿಮಿತ್ತ ನಗರದ ಅನ್ವೇಷಣ ಕೂಟ ವತಿಯಿಂದ ಇಲ್ಲಿನ ಸಾಧನಕೇರಿ ಚೈತ್ರದ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸುಬ್ಬಣ್ಣನವರ ನೆನಪಿನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನೀನಾಸಂ ಸಂಸ್ಥೆಯ ತಿರುಗಾಟ, ಮರು ತಿರುಗಾಟಗಳೆಲ್ಲ ರಾಜ್ಯ ವ್ಯಾಪಿಯಾಗಿ ಮೆಚ್ಚುಗೆ ಪಡೆದಿವೆ. ಗ್ರಾಮಾಂತರದ ಸಂಸ್ಥೆಯೊಂದು ಈ ಮಟ್ಟದಲ್ಲಿ ಬೆಳೆಯಬಹುದೆ? ಎಂಬ ಅಚ್ಚರಿ ಮೂಡಿಸುತ್ತದೆ. ತಮ್ಮ ಬಹುಮುಖಿ ಸಾಧನೆಗಳಿಂದ ಈ ವಾಮನಮೂರ್ತಿ ತ್ರಿವಿಕ್ರಮನಾಗಿ ಬೆಳೆದು ನಿಂತಾಗ ಅವರ ಸಾಧನೆಗಳನ್ನು ಗುರುತಿಸಿ ಏಶಿಯಾದಲ್ಲಿಯೇ ಅತೀ ದೊಡ್ಡ ಪ್ರಶಸ್ತಿ ಎನಿಸಿಕೊಂಡ "ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ' ಸಂದಿರುವುದು ಸೂಕ್ತ ಗೌರವ ಎನಿಸುತ್ತದೆ ಎಂದು ಸುಬ್ಬಣ್ಣನವರ ದಶಮುಖಗಳನ್ನು ಸವಿವರವಾಗಿ ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಲಿನಿ ರುನಾಥ ಮಾತನಾಡಿದರು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಅನಿಲ ಕಾಖಂಡಿಕಿ, ಡಾ. ಹ.ವೆಂ. ಕಾಖಂಡಿಕಿ, ಎಂ.ಆರ್.ಬಾಳಿಕಾಯಿ, ಡಾ. ಬಾಳಣ್ಣ ಶೀಗಿಹಳ್ಳಿ, ರಮೇಶ ಇಟ್ನಾಳ, ಶ್ರೀಧರ ಗಾಂವಕರ, ಡಾ. ಅರವಿಂದ ಯಾಳಗಿ, ಎಂ.ಎಸ್. ಪರಮೇಶ್ವರ, ಇತರರು ಇದ್ದರು.