ಜಿಲ್ಲೆ

ಮೂಳೂರು ಜುಮಾ ಮಸೀದಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

Udupi

ಪಡುಬಿದ್ರಿ: ಜಿಲ್ಲೆಯ ಪ್ರತಿಷ್ಠಿತ ಜಮಾತ್‌ಗಳಲ್ಲಿ ಒಂದಾಗಿರುವ ಮೂಳೂರು ಜುಮಾ ಮಸೀದಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಎಂಜೆಎಂ ಆ್ಯಪ್ ಮಸೀದಿ ಸಮಿತಿಯ ಉಪಾಧ್ಯಕ್ಷ ಸೈಯ್ಯದ್ ಮುರಾದ್ ಅಲಿ ಶುಕ್ರವಾರ ಬಿಡುಗಡೆಗೊಳಿಸಿದರು.

ಮೂಳೂರು, ಉಚ್ಚಿಲ, ಪಯ್ಯರ್, ಕೊಪ್ಪಲಂಗಡಿ, ಪಣಿಯೂರು ಒಳಗೊಂಡು ಜಮಾಅತ್ ವ್ಯಾಪ್ತಿಗೊಳಪಟ್ಟು 624 ಮನೆಗಳಿವೆ. ಜಮಾತಿನ ಎಲ್ಲ ವಿವರಗಳು ಸಾಫ್ಟ್‌ವೇರ್ ಮೂಲಕ ಡಿಜಿಟಲೈಸೇಶನ್ ಮಾಡಲಾಗಿದ್ದು, ಈಗ ಮತ್ತಷ್ಟು ಪಾರದರ್ಶಕಗೊಳಿಸಲು ಮಸೀದಿಯ ಎಂಜೆಎಂ ಆ್ಯಪ್ ಸಿದ್ಧಪಡಿಸಲಾಗಿದೆ.

ಈ ಅಪ್ಲಿಕೇಶನ್ ಮೂಲಕ ಜಮಾತರು ಎಲ್ಲಿದ್ದರೂ ತಮ್ಮ ಮಸೀದಿಯ ಚಂದಾ ವಿವರ ಪಡೆದುಕೊಳ್ಳಬಹುದು. ಅಲ್ಲದೆ ಜಮಾತಿನ ಸಂಪೂರ್ಣ ಮಾಹಿತಿ, ಮುಂದಿನ ಯೋಜನೆಗಳು, ಸಮಿತಿಯ ಹಾಗೂ ಸಿಬ್ಬಂದಿ ವಿವರ ಮತ್ತು ಸಂಪರ್ಕ ಸಂಖ್ಯೆ, ಸಮಯ, ಹಿಜರಿ ದಿನ ಹಾಗೂ ಮಸೀದಿ ಕೇಂದ್ರೀಕರಿಸಿ ಐದು ವಕ್ತ್ ನಮಾಝಿನ ಸಮಯ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಕಚೇರಿ ಮೊಬೈಲ್ ಸಂಖ್ಯೆ 7026471887 ಸಂಪರ್ಕಿಸಬಹುದು ಎಂದು ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ವಿವರಿಸಿದರು.

ಮುಂದಿನ ದಿನದಲ್ಲಿ ಈ ಆ್ಯಪ್ ಮತ್ತಷ್ಟು ಸಂಪರ್ಕ ಸಾಧನವಾಗಿ ಬದಲಾವಣೆ ಮಾಡಲಾಗುವುದು ಎಂದು ಅಪ್ಲಿಕೇಶನ್ ತಯಾರಿಸಿದ ಜಮಾತ್ ಸದಸ್ಯ ಫಾರೂಕ್ ಉಚ್ಚಿಲ ಮಾಹಿತಿ ನೀಡಿದರು.

ಮೂಳೂರು ಜುಮಾ ಮಸೀದಿಯ ಮುದರ‌್ರಿಸ್ ಅಬ್ದುಲ್ಹಾ ರಹಿಮಾನ್ ಮದನಿ ಉಸ್ತಾದ್ ದುವಾಶೀರ್ವಚನ ನೆರವೇರಿಸಿದರು. ಹೈದರ್ ಅಲಿ ಅಹ್ಸನಿ ಉಸ್ತಾದ್, ಉಪಾಧ್ಯಕ್ಷ ಜಿಎಂ ಉಮ್ಮರಬ್ಬ, ಗೌರವಾಧ್ಯಕ್ಷ ಮೊಯಿದಿನ್ ದರ್ಖಾಸ್, ಕೋಶಾಧಿಕಾರಿ ಅಬ್ಬು ಹಾಜಿ ಹಾಗೂ ಇಬ್ರಾಹಿಂ ನಹೀಮಿ ಉಸ್ತಾದ್ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಯೂಸುಫ್ ಮತ್ತು ಫೈಝಲ್ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.