ಜಿಲ್ಲೆ

ಸುಸ್ಥಿರ ಅಭಿವೃದ್ಧಿಗೆ ಮುಳ್ಳುಸೋಗೆ ಮಾದರಿ

reportermys

ಸುನಿಲ್ ಪೊನ್ನೇಟಿ ಮಡಿಕೇರಿ


ಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರಮಟ್ಟದ "ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ" ಕ್ಕೆ ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಯ್ಕೆ ಆಗಿದೆ. ಈ ಮೂಲಕ ೧.೫ ಕೋಟಿ ರೂ. ಮೊತ್ತದ ಬಹುಮಾನ ಹಣವನ್ನು ಪಂಚಾಯಿತಿ ಪಡೆದುಕೊಂಡಿದೆ.


೨೦೨೩ ನೇ ಸಾಲಿನ ರಾಷ್ಟ್ರೀಯ ಪಂಚಾಯಿತಿ ಪುರಸ್ಕಾರಗಳನ್ನು ಶುಕ್ರವಾರ ಘೋಷಿಸಲಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆಗೆ ಮುಳ್ಳುಸೋಗೆ ಗ್ರಾ.ಪಂ. ಪಾತ್ರವಾಗಿದೆ.


"ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ" ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅತ್ಯುತ್ತಮ ಮೂರು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುತ್ತಿದೆ. ಪ್ರಥಮ ಬಹುಮಾನ ಒಂದೂವರೆ ಕೋಟಿ ರೂ. ಎರಡನೇ ಬಹುಮಾನ ೭೫ ಲಕ್ಷ ರೂ. ಹಾಗೂ ಮೂರನೇ ಬಹುಮಾನದ ಮೊತ್ತ ೫೦ ಲಕ್ಷ ರೂ. ಆಗಿರುತ್ತದೆ.


೨೦೨೧-೨೨ನೇ ಸಾಲಿನಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ವಿವಿಧ ಯೋಚನೆಗಳ ಅನುಷ್ಠಾನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು "ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ" ವಿಭಾಗದಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಯನ್ನಾಗಿ ಘೋಷಿಸಿ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇದು ರಾಷ್ಟ್ರಮಟ್ಟದ ಪ್ರಶಸ್ತಿಯಾಗಿದ್ದು, ಈ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪಾತ್ರವಾಗಿದೆ.


ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸುವುದು, ಈ ನಿಟ್ಟಿನಲ್ಲಿ ಪಂಚಾಯಿತಿಗಳ ಮಧ್ಯೆ ಕ್ರೀಡಾಮನೋಭಾವದ ಸ್ಪರ್ಧೆ ನಡೆಯಲಿ ಎನ್ನುವ ಉದ್ದೇಶದಿಂದ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ೨೦೨೨ರಿಂದ ಈ ಪ್ರಶಸ್ತಿ ಕೊಡುತ್ತಾ ಬಂದಿದೆ. ೯ ಬಗೆಯ ಸ್ಥಳೀಯ ಸುಸ್ಥಿರ ಅಭಿವೃದ್ಧಿ ಗುರಿಗಳ ಪರಿಕಲ್ಪನೆ ಜತೆ ಪ್ರಶಸ್ತಿಯ ಮಾನದಂಡ ಜೋಡಿಸಲಾಗಿದೆ. ೨೦೩೦ರ ವೇಳೆಗೆ ಸ್ಥಳೀಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮತ್ತು ಈ ಪ್ರಕ್ರಿಯೆ ಚುರುಕುಗೊಳಿಸಲು ಉತ್ತೇಜಿಸುವ ಗುರಿಯನ್ನೂ ಈ ಪ್ರಶಸ್ತಿ ಹೊಂದಿದೆ.


ಈ ಸ್ಪರ್ಧೆ ತಾಲೂಕು, ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ. ಎಲ್ಲಾ ಪಂಚಾಯಿತಿಗಳಿಗೂ ಅವುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಶ್ರೇಯಾಂಕ ನೀಡಲಾಗುತ್ತದೆ. ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ ಪಂಚಾಯಿತಿ, ಆರೋಗ್ಯಕರ ಪಂಚಾಯಿತಿ, ಮಕ್ಕಳ ಸ್ನೇಹಿ ಪಂಚಾಯಿತಿ, ಸಮರ್ಪಕ ನೀರಿನ ವ್ಯವಸ್ಥೆ ಹೊಂದಿರುವ ಪಂಚಾಯಿತಿ, ಸ್ವಚ್ಛ ಮತ್ತು ಹಸಿರು ಪಂಚಾಯಿತಿ, ಪಂಚಾಯತಿಯಲ್ಲಿ ಸ್ವಾವಲಂಬಿ, ಮೂಲಸೌಕರ್ಯ ವ್ಯವಸ್ಥೆ, ಸಾಮಾಜಿಕವಾಗಿ ಸುರಕ್ಷಿತ ಪಂಚಾಯಿತಿ ಉತ್ತಮ ಆಡಳಿತದೊಂದಿಗೆ ಪಂಚಾಯಿತಿ, ಮಹಿಳಾ ಸ್ನೇಹಿ ಪಂಚಾಯಿತಿ ಹೀಗೆ ೯ ಪ್ರಶಸ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳು ಪ್ರಶ್ನಾವಳಿಗಳನ್ನು ಭರ್ತಿ ಮಾಡುವ ಮೂಲಕ ಪ್ರಶಸ್ತಿಗಾಗಿ ಸ್ಪರ್ಧೆಗೆ ಇಳಿಯಬೇಕಾಗುತ್ತದೆ.


ರಾಷ್ಟ್ರೀಯ ಮಟ್ಟದ ಈ ಪ್ರಶಸ್ತಿಗಳನ್ನು ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಎರಡು ವಿಭಾಗಗಳ ಅಡಿಯಲ್ಲಿ ನೀಡಲಾಗುತ್ತದೆ. ವೈಯಕ್ತಿಕ ವಿಷಯವಾರು ಪ್ರದರ್ಶನಕ್ಕಾಗಿ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ವಿಕಾಸ್ ಪುರಸ್ಕಾರ್ ನೀಡಿದರೆ ಎಲ್ಲಾ ವಿಷಯಗಳ ಅಡಿಯಲ್ಲಿ ಒಟ್ಟಾರೆ ಪ್ರದರ್ಶನಕ್ಕಾಗಿ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ್ ಕೊಡಲಾಗುತ್ತದೆ. ಇದೀಗ ಮುಳ್ಳುಸೋಗೆ ಪಂಚಾಯಿತಿಗೆ ಬಂದಿರುವುದು ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ.

ಕುಶಾಲನಗರ ಪುರಸಭೆಯಲ್ಲಿ ವಿಲೀನ
ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯತಿ ಇತ್ತೀಚೆಗಷ್ಟೇ ಕುಶಾಲನಗರ ಪುರಸಭೆಯಲ್ಲಿ ವಿಲೀನವಾಗಿದೆ. ಇದಕ್ಕೂ ಮೊದಲು ಈ ಪಂಚಾಯಿತಿ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿತ್ತು. ಕಸ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳು, ಇಲ್ಲಿಯ ಡಿಜಿಟಲ್ ಲೈಬ್ರರಿ, ಆಸನ ವ್ಯವಸ್ಥೆಗಳು, ಕಾರ್ಪೋರೇಟ್ ಕಚೇರಿ ಮಾದರಿಯ ಸುಸಜ್ಜಿತ ಕಚೇರಿ, ಉಚಿತ ವೈಫೈ ಗಮನ ಸೆಳೆಯುತ್ತಿತ್ತು. ಇಲ್ಲಿಯ ಆತ್ಯಾಧುನಿಕ ವ್ಯವಸ್ಥೆಗಳ ಅಧ್ಯಯನಕ್ಕೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ತಂಡಗಳು ಬರುತ್ತಿದ್ದವು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳೂ ಶಹಬ್ಬಾಸ್‌ಗಿರಿ ಕೊಟ್ಟಿದ್ದರು. ಪಂಚಾಯಿತಿ ಸಾಧನೆ ಹಿಂದೆ ಇಲ್ಲಿ ಪಿಡಿಒ ಆಗಿದ್ದ ಸುಮೇಶ್ ಶ್ರಮವೂ ಸಾಕಷ್ಟಿದೆ. ಇದಕ್ಕೂ ಮೊದಲು ದುಂಡಳ್ಳಿ ಗ್ರಾ.ಪಂ.ನಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲೂ ಮಾದರಿ ಕೆಲಸಗಳ ಮೂಲಕ ಜನಮೆಚ್ಚುಗೆಗಳಿಸಿದ್ದರು. ಪ್ರಸ್ತುತ ಕೆಲಸ ಮಾಡುತ್ತಿರುವ ಮಾದಾಪುರ ಪಂಚಾಯಿತಿಯಲ್ಲೂ ತಮ್ಮ ಜಾದೂ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಇದೀಗ ೨೦೨೨ರ ಸಾಧನೆಗಾಗಿ ಪಂಚಾಯಿತಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಜೊತೆ ೧.೫ ಕೋಟಿ ರೂಪಾಯಿಯ ದೊಡ್ಡ ಮೊತ್ತವೂ ಸಿಗುತ್ತಿದೆ. ಸದ್ಯ ಮುಳ್ಳುಸೋಗೆ ಪಂಚಾಯಿತಿ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಈ ಹಣ ಯಾರಿಗೆ ಸೇರಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆದಿದ್ದು, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ.

೧೭ಕ್ಕೆ ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ ಸಮಾರಂಭ ಈ ತಿಂಗಳ ೧೭ಕ್ಕೆ ನವದೆಹಲಿಯಲ್ಲಿ ನಡೆಯಲಿದೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಮಾನ್ಯವಾಗಿ ಪಂಚಾಯಿತಿಗೆ ಸಂಬಂಧಿಸಿದ ಪ್ರಶಸ್ತಿಗಳನ್ನು ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಒ ಸ್ವೀಕರಿಸುತ್ತಾರೆ. ಆದರೆ ಈಗ ರಾಜ್ಯದಲ್ಲಿ ಮಾದರಿ ಚುನಾವಣಾ ಸಂಹಿತೆ ಜಾರಿಯಲ್ಲಿದೆ. ಮುಳ್ಳುಸೋಗೆ ಗ್ರಾ.ಪಂ. ಕೂಡ ಅಸ್ತಿತ್ವದಲ್ಲಿ ಇಲ್ಲ. ಹಾಗಾಗಿ ಪ್ರಶಸ್ತಿ ಯಾರು ಸ್ವೀಕರಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಪಂಚಾಯಿತಿಯ ಒಟ್ಟಾರೆ ಕೆಲಸಕ್ಕಾಗಿ ಈ ಪ್ರಶಸ್ತಿ ಬಂದಿದೆ. ಪ್ರಶಸ್ತಿಗಳು ಅವಾಗಿಯೇ ಬರಬೇಕು. ಅರ್ಜಿ ಹಾಕಿ ತೆಗೆದುಕೊಳ್ಳಬಾರದು ಅಂದುಕೊಂಡಿದ್ದೆ. ಆದರೆ ನಾವು ಮಾಡಿರುವ ಕೆಲಸ ಮತ್ತೊಬ್ಬರಿಗೆ ತಿಳಿಯಲಿ ಎನ್ನುವ ಕಾರಣಕ್ಕೆ ದಾಖಲೆಗಳ ಜತೆ ಅರ್ಜಿ ಹಾಕಿದ್ದೆವು. ಸರ್ಕಾರ ಗುರುತಿಸಿ ಪ್ರಶಸ್ತಿ ಕೊಟ್ಟಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಆಡಳಿತ ಮಂಡಳಿ ಸಹಕಾರದಿಂದ ಇದು ಸಾಧ್ಯವಾಗಿದೆ.
-ಎಂ.ಆರ್.ಸುಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುಳ್ಳುಸೋಗೆ

ಮುಳ್ಳುಸೋಗೆ ಗ್ರಾ.ಪಂ ಹಿಂದಿನ ಅವಧಿಯಲ್ಲಿ ಮಾಡಿದ ಸಾಧನೆಗೆ ಈ ಪ್ರಶಸ್ತಿ ಬಂದಿದೆ. ಪಂಚಾಯಿತಿಯಲ್ಲಿ ಉತ್ತಮ ಕೆಲಸಗಳು ಆಗಿತ್ತು. ಸದ್ಯ ಮುಳ್ಳುಸೋಗೆ ಪಂಚಾಯಿತಿ ಕುಶಾಲನಗರ ಪುರಸಭೆ ಆಡಳಿತಕ್ಕೆ ಒಳಪಟ್ಟಿದೆ. ಹಾಗಾಗಿ ಬಹುಮಾನದ ಈ ಮೊತ್ತ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲೇ ಉಳಿಯಲಿದ್ದು ಹಣ ಏನು ಮಾಡಬೇಕು ಎನ್ನುವುದು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಅಗಲಿದೆ.
ಡಾ.ಆಕಾಶ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು