ಜಿಲ್ಲೆ

ಮೂಲ್ಕಿ ರೈಲ್ವೆಗೆ ಬೇಕಿದೆ ಕಾಯಕಲ್ಪ:ಸಮರ್ಪಕ ಅಭಿವೃದ್ಧಿಗೆ ಬೇಕಿದೆ ಆದ್ಯತೆ :ಪ್ರಯಾಣಿಕರಿಂದ ಕೇಳಿಬಂದಿದೆ ಬೇಡಿಕೆ

ಸೌಮ್ಯ ಆರ್

ಭಾಗ್ಯವಾನ್ ಸನಿಲ್ ಮೂಲ್ಕಿ

ತಾಲೂಕು ಕೇಂದ್ರವಾಗಿ ಬೆಳೆಯುವ ಮೂಲ್ಕಿಯಲ್ಲಿ ಇರುವ ರೈಲ್ವೆ ನಿಲ್ದಾಣ ಸಮಸ್ಯೆಗಳ ಆಗರವಾಗಿದೆ. ಈ ಭಾಗದ ರೈಲ್ವೆ ಪ್ರಯಾಣಿಕರು ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ರೈಲ್ವೆ ನಿಲ್ದಾಣವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಬೇಡಿಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಹೆಜಮಾಡಿ, ಪಡುಬಿದ್ರಿ, ಕಾಪು, ಎರ್ವಾಳು, ಪಲಿಮಾರು, ಕರ್ನಿರೆ, ಬೆಳ್ಳಣ್ಣು ಹಾಗೂ ದ.ಕ. ಜಿಲ್ಲೆಯ ಮೂಡುಬಿದಿರೆ, ಕಟೀಲು, ಬಜ್ಪೆ, ಎಕ್ಕಾರು, ನಿಡೋಡಿ, ಕಲ್ಲಮುಂಡ್ಕೂರು ಮಾತ್ರವಲ್ಲದೆ ಇತರ ಭಾಗಗಳಿಂದಲೂ ಪ್ರಯಾಣಿಕರು ಮೂಲ್ಕಿ ರೈಲ್ವೆ ನಿಲ್ದಾಣವನ್ನೇ ಆಶ್ರಯಿಸಿದ್ದಾರೆ.

ಸಮರ್ಪಕ ರಸ್ತೆಯೂ ಇಲ್ಲಿಲ್ಲ

ಮೂಲ್ಕಿ ನಿಲ್ದಾಣಕ್ಕೆ ಮುಖ್ಯರಸ್ತೆಯಿಂದ ಅರ್ಧ ಕಿ.ಮೀ. ಪಂಚಾಯಿತಿ ರಸ್ತೆಯಲ್ಲಿ ತೆರಳಿದ ಬಳಿಕ ನಿಲ್ದಾಣ ರಸ್ತೆ ಆರಂಭಗೊಳ್ಳುತ್ತದೆ. ಈ ರಸ್ತೆ ಅಗಲ ಕಿರಿದಾಗಿದ್ದು, ಹೊಂಡ-ಗುಂಡಿಗಳಿಂದ ಕೂಡಿದೆ. ಮಳೆಗಾಲದಲ್ಲಿ ಹುಲ್ಲು ಪೊದೆಗಳು ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತದೆ. ರಸ್ತೆ ಬದಿಯಲ್ಲಿ ಮುರಿದ ಗಾಜು ಕಸ-ಕಡ್ಡಿಗಳು ತುಂಬಿವೆ. ಈ ಪ್ರದೇಶ ರೈಲ್ವೆ ನಿಲ್ದಾಣ ನಿವೇಶನದಲ್ಲಿದ್ದು, ರಸ್ತೆ ಅಗಲಗೊಳಿಸಲು ಬೇಕಾದ ಸ್ಥಳ ಇದೆ. ಈ ಕಾರ್ಯವನ್ನು ಇಲಾಖೆ ನಿಲ್ದಾಣ ಅಭಿವೃದ್ಧಿ ಸಂದರ್ಭ ಅಗತ್ಯವಾಗಿ ಮಾಡಬೇಕಾಗಿದೆ.

ಪ್ರಮುಖ ನಿಲ್ದಾಣಕ್ಕಿಲ್ಲ ಸೌಕರ್ಯ

ಮಂಗಳೂರು- ಉಡುಪಿ ನಡುವೆ ಕೇವಲ ಮೂಲ್ಕಿ ಮತ್ತು ಸುರತ್ಕಲ್ ರೈಲು ನಿಲ್ದಾಣದಲ್ಲಿ ಮಾತ್ರ ಹೆಚ್ಚು ರೈಲುಗಳು ನಿಲ್ಲುತ್ತವೆ. ಉಳಿದ ನಿಲ್ದಾಣಗಳಲ್ಲಿ ದಿನಕ್ಕೆ ಬೆರಳೆಣಿಕೆಯ ರೈಲುಗಳು ಮಾತ್ರ ನಿಲ್ಲುತ್ತವೆ. ಇಂತಹ ಪ್ರಮುಖ ರೈಲು ನಿಲ್ದಾಣ ಕೆಲವೊಂದು ಮೂಲಸೌಕರ್ಯ ಸಮಸ್ಯೆಗಳು ಮತ್ತು ರಸ್ತೆ ಸಂಪರ್ಕದ ತೊಂದರೆಯನ್ನು ಎದುರಿಸುತ್ತಿದೆ.

ಕಿಲ್ಪಾಡಿ ಗ್ರಾಮದ ಅಭಿವೃದ್ಧಿಗೂ ಪೂರಕ

ಮೂಲ್ಕಿ ರೈಲ್ವೆ ನಿಲ್ದಾಣದ ಮೂಲಕ ದಿನಕ್ಕೆ 75ಕ್ಕೂ ಅಧಿಕ ರೈಲುಗಳು ದೇಶದ ವಿವಿಧ ಪ್ರದೇಶಗಳಿಗೆ ಹೋಗುತ್ತಿವೆ. ಅವುಗಳ ಪೈಕಿ ಕೆಲವು ರೈಲುಗಳಿಗೆ ಮಾತ್ರ ನಿಲುಗಡೆ ಇದೆ. ಇದು ಮೂಲ್ಕಿ ಜಂಕ್ಷನ್ ಎಷ್ಟು ಪ್ರಮುಖ ಎನ್ನುವುದು ಸ್ಪಷ್ಟವಾಗುತ್ತದೆ. ಮೂಲ್ಕಿ ರೈಲು ನಿಲ್ದಾಣವನ್ನು ಉನ್ನತೀಕರಿಸಿದರೆ, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದರೆ ಕಿಲ್ಪಾಡಿ ಗ್ರಾಮದ ಅಭಿವೃದ್ಧಿಗೂ ಪೂರಕವಾಗುತ್ತದೆ.

ಸಮರ್ಪಕ ಶೌಚಗೃಹಗಳಿಲ್ಲ

ಫ್ಲಾೃಟ್ ಫಾರಂ ನಡುವಿನಲ್ಲಿ ಶೌಚಗೃಹವಿದ್ದು, ಮುಂದಿನ ಅಥವಾ ಹಿಂದಿನ ತುದಿಗಳಲ್ಲಿ ಇರುವವರು ತಮ್ಮ ಬ್ಯಾಗುಗಳನ್ನು ಬಿಟ್ಟು ಶೌಚಗೃಹಕ್ಕೆ ಬರಲು ಕಷ್ಟ. ಆ ಕಾರಣ ಒಂದು ಫ್ಲಾೃಟ್ ಫಾರಂನಲ್ಲಿ ಕನಿಷ್ಠ ಐದು ಶೌಚಗೃಹಗಳು ಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಕ್ಯಾಂಟೀನ್, ರೆಸ್ಟ್ ರೂಂ ಅಗತ್ಯವಿದೆ.

ಪಾರ್ಕಿಂಗ್ ವ್ಯವಸ್ಥೆ

ರೈಲಿಗೆ ಪ್ರಯಾಣಿಕರನ್ನು ಬಿಡಲು ಬರುವ ಕಾರುಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಎರಡು ಬದಿಯನ್ನೂ ರಿಕ್ಷಾಗಳು ಆಕ್ರಮಿಸಿರುತ್ತವೆ. ಇಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಅಗತ್ಯವಿದೆ. ಹೆಚ್ಚುವರಿ ರೈಲುಗಳ ನಿಲುಗಡೆ, ಉತ್ತಮ ಸೌಕರ್ಯ ಹಾಗೂ ಟಿಕೆಟ್ ಬುಕ್ಕಿಂಗ್ ಕೌಂಟರ್ ಸಹಿತ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದಲ್ಲಿ ಪ್ರಾದೇಶಿಕ ಅಭಿವೃದ್ಧಿಯೊಂದಿಗೆ ಇಲಾಖೆಗೂ ಲಾಭವಿದೆ.

ಪ್ರಯಾಣಿಕರಿಗೆ ಲಭಿಸದ ಮಾಹಿತಿ

ಹಿಂದೆ ಇದ್ದ ಟಿವಿ ಪರದೆ ಈಗ ಇಲ್ಲ. ಹೀಗಾಗಿ ರೈಲು ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಸ್ಪಷ್ಟ ಮಾಹಿತಿ ಸಿಗುವುದಿಲ್ಲ. ವಾತ್ರವಲ್ಲ 24 ಬೋಗಿಗಳಿರುವ ರೈಲಿಗಾಗಿ ಫ್ಲಾೃಟ್ ಫಾರಂ ಉದ್ದಕ್ಕೂ ಬಿಸಿಲು ಅಥವಾ ಮಳೆಯಲ್ಲೇ ಕಾಯುವ ಸ್ಥಿತಿ. ಇಲ್ಲಿ ಛಾವಣಿಯ ಅಗತ್ಯವಿದೆ. ರೈಲ್ವೆ ನಿಲ್ದಾಣದಲ್ಲಿ ಇರುವ ಮೈಕ್ ಸಿಸ್ಟಂ ಫ್ಲಾೃಟ್ ಫಾರಂ ಉದ್ದಕ್ಕೂ ಇಲ್ಲದ ಕಾರಣ ಮುಂದಿನ ಅಥವಾ ಹಿಂದಿನ ತುದಿಗಳಲ್ಲಿ ಇರುವವರಿಗೆ ವಾಹಿತಿ ಲಭ್ಯವಿಲ್ಲ.

ಮುಂಬೈ ರೈಲು ಲೇಟ್ ಆದರೆ ಬಿಸಿಲಿನಲ್ಲಿ ನಿಂತು ಬಹಳ ಸಮಸ್ಯೆಯಾಗುತ್ತಿದೆ. ಒಂದೇ ಫ್ಲಾೃಟ್ ಫಾರಂ ಇರುವುದರಿಂದ ಮತ್ತೊಂದು ದಿಕ್ಕಿಗೆ ಹೋಗುವ ರೈಲು ಹತ್ತಲು ಇಳಿದು ಹತ್ತುವ ಸರ್ಕಸ್ ಮಾಡಬೇಕು. ನಿರಂತರ ರೈಲು ಓಡಾಟ ಇರುವುದರಿಂದ ಅಪಾಯ ಹೆಚ್ಚು. ಮೂಲಸೌಕರ್ಯಗಳ ಕೊರತೆಯಿದ್ದು ಇಲಾಖೆ ಗಮನ ಹರಿಸಬೇಕು. ಆನಂದ ಮಾನಂಪಾಡಿ, ಮುಂಬೈ ಪ್ರಯಾಣಿಕ ಈ ಭಾಗದಲ್ಲಿ ಹಿಂದಿನಿಂದಲೂ ರೈಲುಗಳ ಅವಲಂಬನೆ ಹೆಚ್ಚು. ಮೂಲ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮುಂಬೈಯ ಔದ್ಯಮಿಕ ರಂಗಕ್ಕೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಇಲ್ಲಿನ ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುವೆ. ಸಮಸ್ಯೆಗಳ ಬಗ್ಗೆ ಸಂಸದರಿಗೆ ತಿಳಿಸಲಾಗಿದ್ದು, 1.42 ಕೋಟಿ ರೂ. ವೆಚ್ಚದಲ್ಲಿ ನೂತನ ಫ್ಲಾೃಟ್ ಫಾರಂಗೆ ಶಂಕುಸ್ಥಾಪನೆ ನಡೆಯಲಿದೆ. ಇನ್ನುಳಿದ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸಲಾಗುವುದು. ಉವಾನಾಥ ಕೋಟ್ಯಾನ್ ಮೂಲ್ಕಿ-ಮೂಡುಬಿದಿರೆ ಶಾಸಕರು https://www.vijayavani.net/alvas-dhanvantari-pooja-mahotsava https://www.vijayavani.net/sadashivaraya-remembrance-program