ಉಡುಪಿ: ಕಲೆಗೆ ಯಾವುದೇ ಜಾತಿ ಅಥವಾ ಧರ್ಮದ ಭೇದವಿಲ್ಲ. ಹಿರಿಯ ಪ್ರೋತ್ಸಾಹದಿಂದ ಯಕ್ಷಗಾನ ತಾಳಮದ್ದಲೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಹೇಳಿದರು.
ಶನಿವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿ. ಮನೋರಮಾ ಭಟ್ ಅವರ ಆಡಿಯೊ ನಾಟಕಗಳು ಹಾಗೂ ಸ್ವಯಂವರ ಕೃತಿಗಳನ್ನು ಮುಖಿಯ ರಾಘವಯ್ಯ ಅವರು ಬಿಡುಗಡೆಗೊಳಿಸಿದರು.
ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್ ಮುಖ್ಯ ಅತಿಥಿಯಾಗಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ, ವಿಶ್ರಾಂತ ಪ್ರಾಧ್ಯಾಪಕ ನರಸಿಂಹ ಮೂರ್ತಿ ಆರ್. ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.