ಜಿಲ್ಲೆ

ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ, ಸ್ಮರಣೆಯಲ್ಲಿ ಉಳಿಯುವ ಗೌರವ

ಹುಬ್ಬಳ್ಳಿ: ಹುಟ್ಟಿದ ವ್ಯಕ್ತಿ ಸಾಧನೆ ಮಾಡುತ್ತ ಸಾಗಿದಂತೆ ಸಮಾಜ ಸೇವೆಯಲ್ಲೂ ತೊಡಗಿಕೊಳ್ಳುತ್ತಾನೆ. ಅಂತಹ ಸೇವೆಗೆ ಸಿಗುವ ಗೌರವ ಸನ್ಮಾನಗಳು ಅವರ ಜೀವನದಲ್ಲಿ ಸ್ಮರಣೀಯವಾಗಿ ಉಳಿಯುತ್ತವೆ ಎಂದು ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಮೂರುಸಾವಿರ ಮಠದ ಜಗದ್ಗುರು ಗಂಗಾಧರ ಸ್ವಾಮೀಜಿಯವರ 21ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಸದಾ ಸಮಾಜದ ಬಗ್ಗೆ ಚಿಂತನೆ ಮಾಡುತ್ತ ಬಂದಿರುವ ಹುಬ್ಬಳ್ಳಿಯ ಮೂರುಸಾವಿರ ಮಠವು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳ ಮಠಗಳಿಗೆ ಮಠಾಧೀಶರನ್ನು ನೀಡಿರುವ ಶ್ರೇಯ ಹೊಂದಿದೆ ಎಂದರು.

ಕೂಡಿ ಬಾಳುವುದು, ಊಟ ಮಾಡುವುದು ಹಾಗೂ ಎಲ್ಲರೂ ಒಂದೇ ಎಂಬುದನ್ನು ತಿಳಿಸಿಕೊಟ್ಟಿರುವ ಮೂರುಸಾವಿರ ಮಠವು, ಮಠಗಳು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ಭಾವೈಕ್ಯ ಸಾರಿದ ಮೂರುಸಾವಿರ ಮಠ, ಸಾಹಿತ್ಯ, ಸಂಸತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿಯನ್ನೂ ನಿಭಾಯಿಸಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸಾಹಿತ್ಯ, ಕಲೆ ಮನುಕುಲವನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತವೆ. ಮನುಷ್ಯನ ಮೂಲ ಧ್ಯೇಯ ಸಂತಸದಿಂದ ಇರುವುದಾಗಿದೆ. ಸಾಧನೆ, ಸಿದ್ಧಿಯಿಂದ ಪ್ರಶಸ್ತಿಗಳು ದೊರಕಬೇಕು. ಅದರಿಂದ ಖುಷಿ ದೊರೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅಂದಿನ ಕಾಲಕ್ಕೆ ಮೂರುಸಾವಿರ ಮಠವನ್ನು ದೇಶದಲ್ಲಿ ಮಾದರಿಯಾಗಿ ರೂಪಿಸಿದವರು ಡಾ. ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿಯವರು. ತಾವು ಸ್ವಾಮೀಜಿ ಎನ್ನುವ ಅಹಂ ಅವರಿಗೆ ಇರಲಿಲ್ಲ. ಸಮಾಜ, ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿಯನ್ನು ಅವರು ಹೊಂದಿದ್ದರು ಎಂದು ಸ್ಮರಿಸಿದರು.

ನಮಗೆಲ್ಲರಿಗೂ ನೆಮ್ಮದಿ ನೀಡುವ ಸ್ಥಳಗಳು ಮಠ, ಮಂದಿರಗಳು. ಮಠಾಧೀಶರು ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಸಾಗಬೇಕು. ಜನರು ಸಹ ಸಾಹಿತ್ಯ, ಸಂಸತಿಗಳ ಬಗ್ಗೆ ಒಲವು ಹೊಂದಿರಬೇಕು ಎಂದು ಸಲಹೆ ನೀಡಿದರು.

ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿದರು. ಎರಡೆತ್ತಿನ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನವಲಗುಂದ ವಿರಕ್ತಮಠದ ಶ್ರೀ ಬಸವಲಿಂಗ ಸ್ವಾಮೀಜಿ, ರಾಯನಾಳ ರೇವಣಸಿದ್ಧೇಶ್ವರ ಮಠದ ಶ್ರೀ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಅಗಡಿಯ ಶ್ರೀ ಗುರುಲಿಂಗ ಸ್ವಾಮೀಜಿ, ಮಹೇಂದ್ರ ಸಿಂಘಿ, ಶರಣಪ್ಪ ಕೊಟಗಿ, ಬಿ.ಎಲ್. ಪಾಟೀಲ, ಶಶಿ ಸಾಲಿ, ರಾಜಶೇಖರ ಮೆಣಸಿನಕಾಯಿ, ಸುನೀತಾ ಬುರಬುರೆ, ಇತರರಿದ್ದರು.