ಜಿಲ್ಲೆ

ಗ್ರಾಪಂ ಕದನಕ್ಕೆ ಮುಹೂರ್ತ : ಧಾರವಾಡ ಜಿಲ್ಲೆ, 136 ಪಂಚಾಯ್ತಿ, ಚುನಾವಣ, 22ಕ್ಕೆ ಮೊದಲ, 27ಕ್ಕೆ 2ನೇ ಹಂತಕ್ಕೆ ಮತದಾನ

Dharwad

ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಜಿಲ್ಲೆಯ 144 ಗ್ರಾಪಂಗಳ ಪೈಕಿ 2020ರ ಡಿಸೆಂಬರ್​ಗೆ ಅವಧಿ ಮುಕ್ತಾಯವಾಗುವ 136 ಗ್ರಾಪಂಗಳಿಗೆ ಚುನಾವಣೆ ಜರುಗಲಿದೆ. ರಾಜ್ಯ ಚುನಾವಣೆ ಆಯೋಗದ ವೇಳಾಪಟ್ಟಿಯಂತೆ ಜಿಲ್ಲೆಯಲ್ಲಿ 2 ಹಂತಗಳಲ್ಲಿ ಚುನಾವಣೆ ಜರುಗಲಿದೆ.

ಮೊದಲ ಹಂತದಲ್ಲಿ ಧಾರವಾಡ ತಾಲೂಕಿನ 34, ಅಳ್ನಾವರ 4, ಕಲಘಟಗಿಯ 27 ಸೇರಿ 65 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯುವುದು. ಅದಕ್ಕಾಗಿ ಜಿಲ್ಲಾಧಿಕಾರಿ ಡಿ. 7ರಂದು ಅಧಿಸೂಚನೆ ಹೊರಡಿಸುವರು. ಡಿ. 11ರವರೆಗೆ ನಾಮಪತ್ರ ಸಲ್ಲಿಕೆ. 12ರಂದು ನಾಮಪತ್ರಗಳ ಪರಿಶೀಲನೆ, 14ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. 22ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಜರುಗುವುದು. ಅಗತ್ಯವಿದ್ದರೆ 24ರಂದು ಮರು ಮತದಾನ ನಡೆಯಲಿದೆ.

2ನೇ ಹಂತದಲ್ಲಿ ಹುಬ್ಬಳ್ಳಿ ತಾಲೂಕಿನ 26, ಕುಂದಗೋಳ 23, ನವಲಗುಂದ 14 ಹಾಗೂ ಅಣ್ಣಿಗೇರಿಯ 8 ಸೇರಿ 71 ಗ್ರಾ.ಪಂ.ಗಳಿಗೆ ಚುನಾವಣೆ ಜರುಗುವುದು. ಅದಕ್ಕಾಗಿ ಜಿಲ್ಲಾಡಳಿತ ಡಿ. 11ರಂದು ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಸಲು ಡಿ. 16 ಕೊನೆಯ ದಿನ. 17ರಂದು ನಾಮಪತ್ರ ಪರಿಶೀಲನೆ. ಡಿ. 19ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. 27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಜರುಗುವುದು. ಅಗತ್ಯ ಬಿದ್ದರೆ 29ರಂದು ಮರು ಮತದಾನ ಜರುಗುವುದು. ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆಯು ಡಿ. 30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಜರುಗುವುದು.

ಜಿಲ್ಲೆಯಲ್ಲಿ 675 ಕ್ಷೇತ್ರ

ಚುನಾವಣೆ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 154 ಚುನಾವಣಾಧಿಕಾರಿಗಳು ಹಾಗೂ 166 ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಅವರಿಗೆ ಆಯಾ ತಾಲೂಕಿನಲ್ಲಿ ನ. 25ರಿಂದ 29ರವರೆಗೆ ತರಬೇತಿ ನೀಡಲಾಗಿದೆ. ಚುನಾವಣೆಯಲ್ಲಿ 675 ಕ್ಷೇತ್ರಗಳಿದ್ದು, ಈ ಪೈಕಿ 20 ಕ್ಷೇತ್ರಗಳು ಏಕಸದಸ್ಯ, ಉಳಿದ 655 ಕ್ಷೇತ್ರಗಳು ಬಹು ಸದಸ್ಯ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಿಂದ 1,952 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.

888 ಮತಗಟ್ಟೆ

ಜಿಲ್ಲೆಯಲ್ಲಿ 888 ಮತಗಟ್ಟೆಗಳನ್ನು ಗುರುತಿಸಿರುವ ಜಿಲ್ಲಾಡಳಿತ, ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಜರುಗಿಸಿದೆ. ಈ ಪೈಕಿ 686 ಮೂಲ, ಉಳಿದವು ಹೆಚ್ಚುವರಿ ಮತಗಟ್ಟೆಗಳಾಗಿವೆ. ಈ ಪೈಕಿ ಪೊಲೀಸ್ ಇಲಾಖೆಯೊಂದಿಗೆ ಇನ್ನೊಮ್ಮೆ ರ್ಚಚಿಸಿ, ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಗುರುತು ಸಾಬೀತುಪಡಿಸಲು ಈ ಹಿಂದೆ ನಿಗದಿಪಡಿಸಿದ 21 ದಾಖಲೆಗಳು ಹಾಗೂ ಹೊಸದಾಗಿ ಸೇರ್ಪಡೆಯಾದ ಆಧಾರ್ ಗುರುತಿನ ಚೀಟಿಯಲ್ಲಿ ಯಾವುದಾದರೊಂದು ದಾಖಲೆ ಹಾಜರುಪಡಿಸುವುದು ಕಡ್ಡಾಯ.

ನ.30ರಿಂದಲೇ ನೀತಿ ಸಂಹಿತೆ ಜಾರಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ಅಧಿನಿಯಮದಂತೆ ಚುನಾವಣೆ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ನ. 30ರಿಂದ ಡಿ. 31ರ ಸಂಜೆ 5ರವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ನಗರಪಾಲಿಕೆ, ಮಹಾನಗರ ಪಾಲಿಕೆಗಳಿಗೆ ಅನ್ವಯಿಸುವುದಿಲ್ಲ.