ಲಕ್ಷ್ಮೇಶ್ವರ: ಜಿಟಿಜಿಟಿ ಮಳೆಯ ನಡುವೆಯೂ ಪಟ್ಟಣ ಸೇರಿ ತಾಲೂಕಿನಾದ್ಯಂತ ಮೋಹರಂ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲು ಜನತೆ ಸನ್ನದ್ಧರಾಗಿದ್ದಾರೆ. ಮೊಹರಂ ಹಿಂದು-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ ಇಂದಿಗೂ ತನ್ನ ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬಂದಿದೆ.
ಹಬ್ಬದ ಆಚರಣೆಗೆ ಒಂದು ವಾರ ಮೊದಲಿಂದಲೇ ಎಲ್ಲೆಡೆ ಮೊಹರಂ ಹುಲಿಗಳದ್ದೇ ಅಬ್ಬರ ಕಂಡು ಬರುತ್ತಿದೆ. ಹಸೇನ-ಹುಸೇನರು ವೀರ ಸ್ವರ್ಗವನ್ನಪ್ಪಿದ ಹಿನ್ನ್ನೆಲೆಯಲ್ಲಿ ಆಚರಿಸುವ ಮೊಹರಂ ಹಬ್ಬದ ಸಂದರ್ಭದಲ್ಲಿ ನಂಬಿಕೆಯಂತೆ ಪ್ರಾಯಶ್ಚಿತ್ತ ಮತ್ತು ಹರಕೆಗಾಗಿ ಮೈತುಂಬ ಹುಲಿ ವೇಷ ಬರೆಯಿಸಿಕೊಂಡು ಹಲಗೆ ಬಾರಿಸುತ್ತ, ನಾದಕ್ಕೆ ತಕ್ಕಂತೆ ಹುಲಿ ಕುಣಿಯುತ್ತಾರೆ. ಅಳ್ಳೊಳ್ಳಿ ಬವ್ವಾ ವೇಷದೊಂದಿಗೆ ಜನರನ್ನು ಆಕರ್ಷಿಸುತ್ತ ಕಾಣಿಕೆ ಸ್ವೀಕರಿಸುತ್ತಾರೆ.
ತಮ್ಮ ಮಕ್ಕಳು ಹುಲಿಯಂತೆ ಶಕ್ತಿವಂತ, ಆರೋಗ್ಯವಂತ, ಉಜ್ವಲ ಭವಿಷ್ಯಕ್ಕಾಗಿ ಮತ್ತು ಇಷ್ಟಾರ್ಥ ಸಿದ್ದಿಗಾಗಿ ಅಲೈ ದೇವರಿಗೆ 5, 11, 21 ವರ್ಷ ಅಥವಾ ಜೀವಹುಲಿವೇಷದ ಹರಕೆ ಕಟ್ಟಿಕೊಳ್ಳುತ್ತಾರೆ. ಅದಕ್ಕಾಗಿ ಮೊಹರಂ ಹಬ್ಬದ ವೇಳೆ ಹುಲಿ ವೇಷ ಬರೆಸಿಕೊಳ್ಳುವ ಸಂಪ್ರದಾಯ ಎಲ್ಲೆಡೆ ಕಂಡು ಬರುತ್ತದೆ.
ಹಬ್ಬದ ಹಿನ್ನೆಲೆ ಕಳೆದೊಂದು ವಾರದಿಂದ ಪಟ್ಟಣದಲ್ಲಿ ಹೊಸ ಬಟ್ಟೆ, ದಿನಸಿ ಸೇರಿ ಹಬ್ಬದ ವಸ್ತುಗಳ ಖರೀದಿ ಸಂಭ್ರಮ ಕಂಡು ಬಂದಿತು. ಪಟ್ಟಣ ಸೇರಿ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 52 ಕಡೆ ನಿಗದಿತ ಸ್ಥಳದಲ್ಲಿ ಪಾಂಜಾಗಳ ಪ್ರತಿಷ್ಠಾನೆ ಮಾಡಲಾಗಿದ್ದು, ಭಾನುವಾರ ಪಾಂಜಾಗಳ ಮೆರವಣಿಗೆ ನಡೆದು, ಸಂಜೆ ಹೊಳೆಗೆ ಸಾಗಿಸುವ ಸಂಪ್ರದಾಯ ನೆರವೇರಿಸಲಾಗುತ್ತದೆ.