ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಶನಿವಾರ ಮೊಹರಂ ಕೊನೆಯ ದಿನ ಅಂಗವಾಗಿ ಅಲಾಯಿ ದೇವರ ಮೆರವಣಿಗೆ ನಡೆಸಲಾಯಿತು. 
ಜಿಲ್ಲೆ

ಕೊನೆಯ ದಿನವಾದ ಶನಿವಾರ ಸಂಭ್ರಮದ ಮೊಹರಂ ಆಚರಣೆ

ಕೊಪ್ಪಳ: ಮೊಹರಂ ಕೊನೆಯ ದಿನ ಅಂಗವಾಗಿ ನಗರ ಸೇರಿ ತಾಲೂಕಿನ ಭಾಗ್ಯನಗರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಂಭ್ರಮ ಕಂಡಬಂತು. ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಅಲಾಯಿ ದೇವರ ಆರಾಧನೆ ಎಲ್ಲೆಡೆ ಜೋರಾಗಿತ್ತು.

ನಗರದ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಶನಿವಾರ ಬೆಳಗ್ಗಯೇ ಸವಾರಿ ಹೋಗಿಬಂದವು. ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ನಮಿಸಿ ಇಷ್ಟಾರ್ಥ ಪೂರೈಸುವಂತೆ ಬೇಡಿಕೊಂಡರು. ಕೆಂಪು ಸಕ್ಕರೆ, ಹೂವಿನ ಹಾರ ನೈವೇದ್ಯ ಅರ್ಪಿಸಿದರು. ಅಲಾಯಿ ಕುಣಿಯಲ್ಲಿ ಕಟ್ಟಿಗೆ, ಉಪ್ಪು ಹಾಕಿ ಭಕ್ತಿ ಮೆರೆದರು.

ಕೊನೆಯ ದಿನವಾದ ಕಾರಣ ಸಿಂಗಾರಗೊಂಡಿದ್ದ ದೇವರುಗಳು ಸಂಜೆಯಾಗುತ್ತಲೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟವು. ಜನರು ದಾರಿಯುದ್ದಕ್ಕೂ ತಂಡೋಪ ತಂಡವಾಗಿ ನಿಂತುಕೊಂಡು ಅಂತಿಮ ದರ್ಶನ ಪಡೆದು ಪುನೀತರಾದರು.

ಭಾಗ್ಯನಗರ ಪಟ್ಟಣದಲ್ಲಿ ಪ್ರತಿ ವರ್ಷ ವಿಶೇಷವಾಗಿ ವಿಜೃಂಭಣೆಯಿಂದ ಹಬ್ಬ ಆಚರಿಸುವುದು ವಾಡಿಕೆ. ಈ ವರ್ಷವೂ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಹಬ್ಬದ ಸಡಗರ ಕಂಡುಬಂತು. ಜನರು ಮಸೀದಿ ಬಳಿ ಆಗಮಿಸಿ ದೈವದ ಕಾರ್ಯದಲ್ಲಿ ಭಾಗಿಯಾದರು. ಸಂಜೆ ಅಂತಿಮ ಮೆರವಣಿಗೆ ಮುಗಿದ ಬಳಿಕ ದೇವರನ್ನು ವಿಸರ್ಜಿಸಿ ಹಬ್ಬಾಚರಣೆ ಮುಗಿಸಲಾಯಿತು.