ಆನಂದಪುರ ಸಮೀಪದ ಇಸ್ಲಾಂಪುರದಲ್ಲಿ ಮೊಹರಂ ಹಬ್ಬದ ಆಚರಣೆಯಲ್ಲಿ ಹಿಂದು-ಮುಸ್ಲಿಮರು ಪಾಲ್ಗೊಂಡಿದ್ದರು.  
ಜಿಲ್ಲೆ

ಭಾವೈಕ್ಯತೆ ಬೆಸೆದ ಮೊಹರಂ ಹಬ್ಬ

ಆನಂದಪುರ: ಸಮೀಪದ ಇಸ್ಲಾಂಪುರದಲ್ಲಿ ಶನಿವಾರ ಶ್ರದ್ಧಾಭಕ್ತಿಯಿಂದ ಮೊಹರಂ ಹಬ್ಬ ಆಚರಿಸಲಾಯಿತು. ಹಿಂದುಗಳು ಸಹ ಪೂಜೆ, ಮೆರವಣಿಗೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.

ಗ್ರಾಮದ ಶೇಖ್ ಬುಡೇನ್ ಸಾಹೇಬರ ಮನೆಯಂಗಳದಲ್ಲಿ ಅಲಾಬಿ ದೇವರ ಗುಡಿಯಿದ್ದು, ಇಡೀ ಉತ್ಸವದ ಕೇಂದ್ರಬಿಂದುವಾಗಿತ್ತು. ಅಲಾಬಿ ದೇವರನ್ನು ಹೂವು ಮತ್ತಿತರ ಪೂಜಾ ಸಾಮಗ್ರಿಗಳಿಂದ ಅಲಂಕರಿಸಿ ವಿಶೇಷವಾದ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ಇಡೀ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮುಂಭಾಗದಲ್ಲಿ ಹಿಂದುಗಳು ಮಂಗಳವಾದ್ಯ ನುಡಿಸುತ್ತಾ ಸಾಗಿದರೆ, ಪಲ್ಲಕ್ಕಿಗೆ ಮುಸ್ಲಿಂ ಮತ್ತು ಹಿಂದು ಯುವಕರು ಹೆಗಲು ಕೊಟ್ಟಿದ್ದು ವಿಶೇಷ.
ಲೋಬಾನದ ಹೊಗೆಯ ಪರಿಮಳವನ್ನು ಪಸರಿಸುತ್ತಾ, ದೇವರ ಸ್ತುತಿ ಮಾಡುತ್ತಾ ದಾರಿಯುದ್ದಕ್ಕೂ ಸಾಗುತ್ತಾ ಮುಸ್ಲಿಮರು ಹಾಗೂ ಹಿಂದುಗಳು ಒಂದೇ ಕುಟುಂಬದವರಂತೆ ಹಬ್ಬದಲ್ಲಿ ಪಾಲ್ಗೊಂಡರು.
ಉತ್ಸವ ಸಮಿತಿಯ ಅಧ್ಯಕ್ಷ ಶೇಖ್ ಬುಡೇನ್ ಸಾಹೇಬ್, ಕಾರ್ಯದರ್ಶಿ ಹಂಜಾ ಮಹಮದ್, ಸದಸ್ಯರಾದ ಶಾಂತಕುಮಾರ್, ಶೇಖರಣ್ಣ, ವೀರೇಂದ್ರ, ಶೇಖರ ಪೂಜಾರಿ, ಬಶೀರ್, ಯೂಸಫ್, ನಭಿ, ಅಬ್ದುಲ್ ಅಕ್ತರ್, ಮಹಮದ್ ಘೌಸ್, ಅಲಿ, ರಂಗನಾಥಪ್ಪ, ತೌಸೀಫ್, ಆರೀಫ್, ಅಬ್ದುಲ್ ಘನಿ, ಮಹಮದ್ ಆಲ್ನಿಯಾಜ್, ಅಸ್ಲಾಂ ಇತರರಿದ್ದರು.