ಜಾಲಹಳ್ಳಿಯಲ್ಲಿ ಮೊಹರಂ ಹಬ್ಬದ ನಿಮಿತ್ತ ಹಿಂದು ಮುಸ್ಲಿಮರು ಅಲಾಯಿ ದೇವರನ್ನು ಹೊತ್ತಿರುವುದು. 
ಜಿಲ್ಲೆ

ಮೊಹರಂ; ವಿವಿಧ ಸಮುದಾಯದಿಂದ ಧಾರ್ಮಿಕ ಕಾರ್ಯ

ನರೇಶ್ ಕುಮಾರ್

ದೇವದುರ್ಗ: ಹಿಂದು-ಮುಸ್ಲಿಮರ ಭಾವೈಕ್ಯ ಸಾರುವ ಮೊಹರಂ ಹಬ್ಬವನ್ನು ತಾಲೂಕಿನ ಜಾಲಹಳ್ಳಿಯಲ್ಲಿ ಹಲವು ವರ್ಷಗಳಿಂದ ಯಾವುದೇ ಗಲಾಟೆಗಳಿಲ್ಲದೆ ಆಚರಣೆ ಮಾಡುವ ಮೂಲಕ ಮಾದರಿಯಾಗಿದೆ.

ವಾಲೈಯಿ ದೇವರ ಮಸೀದಿಯಲ್ಲಿ ರಾಜಮನೆತನದ ರಾಜಾ ರಂಗಪ್ಪ ನಾಯಕ ಮೊಹರಂ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಉಪ್ಪಾರ ಸಮುದಾಯದ ಬಂಡಿ ಮನೆತನದವರು ಗುದ್ದಲಿಪೂಜೆ ಮಾಡಿ ಅಲಾಯಿಕುಣಿ ತೋಡಿ ಹಬ್ಬಕ್ಕೆ ಮೆರುಗು ತರುತ್ತಾರೆ. ಗುರುವಾರ ಹೈದರ್ ಅಲಿ ಮತ್ತು ಇಮಾಮ್ ಖಾಸಿಂ ದೇವರ ಸವಾರಿ ಅದ್ದೂರಿಯಾಗಿ ನಡೆಯಿತು.

ಕತಲ್ ರಾತ್ರಿ ಶನಿವಾರ ದಿನ ಹುಸೇನ್ ಬಾಷಾ ಹಾಗೂ ಸೈಯದ್ ಕಾಸಿಂ ಸವಾರಿ ಜರುಗಲಿದ್ದು, ಹಿಂದು ಮುಸ್ಲಿಮರು ಅಲಾಯಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ದೇಸಾಯಿ ಮನೆತನದ ಕಸಬಿ ಕಟ್ಟೆಯಲ್ಲಿ ವಿಶೇಷ ಸವಾರಿ ನಡೆಯಲಿದೆ. ಸವಾರಿಯಲ್ಲಿ ಭಕ್ತರು ಹುಸೇನ್ ಬಾಷಾಗೆ ಲೋಬಾನ ಅರ್ಪಿಸುವ ಕಾರ್ಯ ಕಣ್ಮನ ಸೆಳೆಯುತ್ತದೆ. ಮಡ್ಡೇರ್ ಓಣಿಯ ಗಂಗಾಮತ ಸಮುದಾಯದವರು ಹಾಗೂ ಲಿಂಗಾಯತ ಸಮುದಾಯದ ಸೌದ್ರಿ ಕುಟುಂಬದವರು ಹುಸೇನ್ ಬಾಷಾ ದೇವರ ಸವಾರಿ ಹೊರುತ್ತಾರೆ.

ಮಾದಲಿ ಹಾಗೂ ಕೆಂಪು ಸಕ್ಕರೆಯನ್ನು ಸರ್ವಧರ್ಮದ ಜನರ ಪ್ರಸಾದವಾಗಿ ದೇವರಿಗೆ ಅರ್ಪಿಸಲಾಗುತ್ತಿದೆ. ಮೊಹರಂ ಕೊನೇ ದಿನ ಭಾನುವಾರ ದಫನ್ ಕಾರ್ಯಕ್ರಮವನ್ನು ದೇಸಾಯಿ ಮನೆತನದ ತೋಟದಲ್ಲಿ ನೆರವೇರಿಸಲಾಗುತ್ತಿದೆ. ಈ ಕಾರ್ಯ ನೋಡಲು ಸಾವಿರಾರು ಜನರು ಭಾಗವಹಿಸುತ್ತಾರೆ. ಸರ್ವ ಧರ್ಮದವರು ಭೇದಭಾವ ಇಲ್ಲದೆ ಮೊಹರಂ ಆಚರಣೆ ಮಾಡುತ್ತಿದ್ದಾರೆ.