ಮುಸ್ಲಿಂ ಸಮುದಾಯದಿಂದ ಪೈಗಂಬರ್ ಜನ್ಮದಿನಾಚರಣೆ
ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಪ್ರವಾದಿ ಮುಹಮ್ಮದ್ (ಸ.) ಪೈಗಂಬರ್ ಜನ್ಮದಿನಾಚರಣೆ ಮಿಲಾದುನ್ನಬಿಯನ್ನು ಸೆಪ್ಟೆಂಬರ್ 5ರಂದು ಸಂಭ್ರಮದಿಂದ ಆಚರಿಸಿದರು.
ಕಾಪು ಪೊಲಿಪು, ಉಚ್ಚಿಲ, ಮೂಳೂರು, ಪಡುಬಿದ್ರೆ, ಕಾರ್ಕಳ, ಶಿರ್ವ, ಕಟಪಾಡಿ, ನೇಜಾರು, ಕುಂದಾಪುರ ತಾಲೂಕಿನ ಕೂಡಿ ಜನಸಾಲೆ, ಬೈಂದೂರು ತಾಲೂಕಿನ ಶಿರೂರು ಸೇರಿದಂತೆ ಹಲವೆಡೆ ಸಂಭ್ರಮದಿಂದ ಮಿಲಾದ್ ಮೆರವಣಿಗೆ ನಡೆಸಲಾಯಿತು. ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ, ಮರಳಿ ಮಸೀದಿಗಳಿಗೆ ಆಗಮಿಸಿ ಸಮಾಪ್ತಿಗೊಂಡಿತು.
ಕಾಪು ಪೊಲಿಪು ಜುಮಾ ಮಸೀದಿಯಿಂದ ಹೊರಟ ಮೆರವಣಿಗೆಯು ಕೊಪ್ಪಲಂಗಡಿಯವರೆಗೆ ಸಾಗಿ, ಬಳಿಕ ಮಜೂರು ಮಲ್ಲಾರ್ ಪಕೀರನ ಕಟ್ಟೆ ಮಸೀದಿಗಳಿಂದ ಆಗಮಿಸಿದ ಮೆರವಣಿಗೆಯ ಜತೆಗೆ ವಾಪಸ್ ಪೊಲಿಪು ಮಸೀಗೆ ಆಗಮಿಸಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಅಲಂಕೃತ ವಾಹನಗಳಲ್ಲಿ ದಫ್ ಕುಣಿತ, ತಾಲೀಮು, ಪ್ರವಾದಿ ಸಂದೇಶ, ದಫ್ ಕುಣಿತ, ಸ್ಕೌಟ್ಸ್ ಹಾಗೂ ಮದರಸಾದ ಮಕ್ಕಳು ಸಾಗಿಬಂದರು.
ಪಡುಬಿದ್ರಿ ಜಮಾಅತ್ ವತಿಯಿಂದ ನಡೆದ ಮಿಲಾದ್ ರ್ಯಾಲಿ ಕಂಚಿನಡ್ಕ ಜುಮ್ಮಾ ಮಸೀದಿಯಿಂದರ ಹೊರಟಿತು. ರಾಜ್ಯ ಹೆದ್ದಾರಿ-ಪಡುಬಿದ್ರಿ ಪೇಟೆ- ಮಾರ್ಕೆಟ್ ರಸ್ತೆಯ ಮೂಲಕ ಪಡುಬಿದ್ರಿ ಜುಮ್ಮಾ ಮಸೀದಿಗೆ ಜಾಥಾ ತಲುಪಿತು. ಜಾಥಾದಲ್ಲಿ ಮದರಸ ಮಕ್ಕಳ ಸ್ಕೌಟ್ಸ್ ಗಮನಸೆಳೆಯಿತು. ಕನ್ನಂಗಾರ್ ಜುಮ್ಮಾ ಮಸೀದಿ ವತಿಯಿಂದಲೂ ಹೆಜಮಾಡಿಯಲ್ಲಿ ಜಾಥಾ ಸಂಚರಿಸಿತು. ಮದರಸಾ ಮಕ್ಕಳ ದಫ್ ಆಕರ್ಷಕವಾಗಿತ್ತು. ಕುಂದಾಪುರ ಕೋಡಿಯ ನಾಲ್ಕು ಮಸೀದಿಗಳಿಗೆ ಸಂಬಂಧಿಸಿದ ಮಿಲಾದ್ ಮೆರವಣಿಗೆ ವಿಜ್ರಂಭಣೆಯಿಂದ ಜರಗಿತು. ಎಂಕೋಡಿಯಿಂದ ಆರಂಭಗೊಂಡ ಮೆರವಣಿಗೆಯು ಸರ್ಕಾರಿ ಆಸ್ಪತ್ರೆವರೆಗೆ ಸಾಗಿ ಬಳಿಕ ವಾಪಸ್ ಅದೇ ಮಾರ್ಗದಲ್ಲಿ ಬಂದು ಎಂಕೋಡಿ ಬಿಲಾಲ್ ಮಸೀದಿಯಲ್ಲಿ ಸಮಾಪ್ತಿಗೊಂಡಿತು.
ಮೀಲಾದುನ್ನಬಿ ಪ್ರಯುಕ್ತ ಮಸೀದಿಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸರ್ವಧಮೀರ್ಯರು ಪಾಲ್ಗೊಂಡಿದ್ದರು. ಕೆಲವೆಡೆ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮರಿಗೆ ಸ್ಥಳೀಯ ಹಿಂದುಗಳು ಪಾನೀಯ, ಸಿಹಿ ತಿಂಡಿ ವಿತರಿಸಿದರು. ಮಿಲಾದುನ್ನಬಿ ಮೆರವಣಿಗೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶುಕ್ರವಾರ ಜುಮಾ ನಮಾಝಿನ ಕಾರಣ ಉಡುಪಿಯ ನೇಜಾರು, ದೊಡ್ಡಣಗುಡ್ಡೆ, ಗಂಗೊಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮೀಲಾದುನ್ನಬಿ ಮೆರವಣಿಗೆಯನ್ನು ಶನಿವಾರ ಹಾಗೂ ರವಿವಾರ ನಡೆಸಲು ಉದ್ದೇಶಿಸಲಾಗಿದೆ.