ಜಿಲ್ಲೆ

ಮೂಗೂರು ತ್ರಿಪುರ ಸುಂದರಿ ಜಾತ್ರೆ ಪೂರ್ವಸಿದ್ಧತಾ ಸಭೆ

ಮೂಗೂರು : ಇತಿಹಾಸ ಪ್ರಸಿದ್ಧ ಕ್ಷೇತ್ರ ಮೂಗೂರಿನಲ್ಲಿ ಜ.13 ರಿಂದ 17ರ ವರೆಗೆ ನಡೆಯಲಿರುವ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದುತಹಸೀಲ್ದಾರ್ ಸುರೇಶ ಆಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು.

ಮೂಗೂರಿನ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಥೋತ್ಸವಕ್ಕೆ ಆಗಮಿಸುವ ಸಕಲ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು. ಶುದ್ಧ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಮಾಡಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಎಂದವರು ತಾಕೀತು ಮಾಡಿದರು. 5 ದಿನ ನಡೆಯಲಿರುವ ಜಾತ್ರೆಗೆ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಜಾತ್ರಾ ವೇಳೆ ನಿರಂತರ ವಿದ್ಯುತ್ ಸರಬರಾಜು, ವೈದ್ಯರ ತಂಡದಿಂದ ತುರ್ತು ಆರೋಗ್ಯ ಸೇವೆ, ಆಂಬುಲೆನ್ಸ್ ವ್ಯವಸ್ಥೆ, ರಾತ್ರಿ ವೇಳೆ ಭದ್ರತೆ, ಗ್ರಾಮದಲ್ಲಿ ನೈರ್ಮಲ್ಯ ಪಾಲನೆ ಇತ್ಯಾದಿಗಳಿಗೆ ಗಮನ ನೀಡಬೇಕು. ಒಟ್ಟಾರೆ ಜಾತ್ರಾ ಕಾರ್ಯಕ್ರಮಗಳು ಸುಗಮವಾಗಿ ಸಾಗಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಹಸೀಲ್ದಾರ್ ಸುರೇಶ ಆಚಾರ್ಯ ಹೇಳಿದರು.

ಗ್ರಾಮಸ್ಥರೂ ಸಹಕರಿಸಬೇಕು: ವಿವಿಧ ಜಿಲ್ಲೆ, ರಾಜ್ಯಗಳಿಂದ ದೇವಿ ಭಕ್ತರು ಜಾತ್ರೆ ಸಂದರ್ಭ ಆಗಮಿಸುತ್ತಾರೆ. ಈ ಸಂದರ್ಭ ಧಾರ್ಮಿಕ ಆಚರಣೆಗೆ ಧಕ್ಕೆ ಬಾರದಂತೆ ಗ್ರಾಮಸ್ಥರೂ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಸುರೇಶ ಆಚಾರ್ಯ ವಿನಂತಿಸಿದರು. ತೆಪ್ಪೋತ್ಸವ ನಡೆಸಬೇಕು: ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಪ್ಪೋತ್ಸವ ನಡೆಸಬೇಕು ಎಂದು ಆಗ್ರಹಿಸಿದರು.ಕಳೆದ 3 ವರ್ಷಗಳಿಂದ ತೆಪ್ಪೋತ್ಸವ ನಡೆಸಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಲ್ಯಾಣಿ ಉಪಯೋಗಕ್ಕೆ ಬಾರದಂತಾಗಿದೆ. ಯಾವ ಕಾರಣಕ್ಕಾಗಿ ತೆಪ್ಪೋತ್ಸವ ಸ್ಥಗಿತಗೊಂಡಿದೆ ಎಂದು ಪ್ರಶ್ನಿಸಿದರು.

ಈ ಬಾರಿ ತೆಪ್ಪೋತ್ಸವ ನಡೆಸಲೇ ಬೇಕು. ತಾಲೂಕು ಆಡಳಿತಕ್ಕೆ ಮಾಡಲು ಆಗದಿದ್ದರೆ ಸೇವಾ ಸಮಿತಿಗೆ ವಹಿಸಿ ಎಂಬ ಬೇಡಿಕೆ ಇಟ್ಟರು. ಗೋಪುರದಲ್ಲಿ ಗಿಡಗಂಟಿಗಳು ಬೆಳೆದಿವೆ. ಇದರಿಂದ ಗೋಪುರ ಶಿಥಿಲವಾಗಲಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ರಥೋತ್ಸವದ ದಿನ ಜನಜಂಗುಳಿ ಹೆಚ್ಚಾಗಲಿದೆ. ಎಲ್ಲರಿಗೂ ದೇವಿಯ ದರ್ಶನ ಲಭ್ಯವಾಗುವಂತೆ ಭಕ್ತರಿಗೆ ಪರ್ಯಾಯ ಸಾಲುಗಳ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಸಲಹೆ ನೀಡಿದರು.

ಕ್ರಮ ವಹಿಸಲಾಗುವುದು: ಪ್ರಾಯೋಗಿಕವಾಗಿ ಆದರೂ ಈ ಬಾರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ದೇವಾಲಯದ ಸಮಸ್ಯೆ ನಿವಾರಿಸಲು ಕ್ರಮ ವಹಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು. ಗ್ರಾಪಂ ನಿವೇಶನದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಭಕ್ತರಿಗೆ ಶಾಶ್ವತ ಸ್ನಾನ ಗೃಹ ಮತ್ತು ಶೌಚಗೃಹ ನಿರ್ಮಿಸಲು ತಹಸೀಲ್ದಾರ್ ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಎಂ. ಡಿ. ಲೋಕೇಶ್, ಉಪಾಧ್ಯಕ್ಷೆ ಶಾಂತಿ, ಉಪ ತಹಸೀಲ್ದಾರ್ ಲಕ್ಷ್ಮೀ, ಸೆಸ್ಕ್ ಎಇಇ ವೀರೇಶ, ಸಿಪಿಐ ಧನಂಜಯ, ಪಿಡಬ್ಲುೃಡಿ ಎಇಇ ಸತೀಶಚಂದ್ರನ್, ತಾಲೂಕು ಆರೋಗ್ಯ ಅಧಿಕಾರಿ ರವಿಕುಮಾರ್, ಡಾ. ರಮೇಶ, ಪಾರುಪತ್ತೇದಾರ ಎಂ. ಬಿ. ಸಾಗರ್, ಉಪನ್ಯಾಸಕ ಕುಮಾರಸ್ವಾಮಿ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.