ಜಿಲ್ಲೆ

ಬದುಕನ್ನು ಔನ್ನತ್ಯಕ್ಕೇರಿಸಲಿ ಸಾಹಿತ್ಯ: ‘ಮುಗದಾರಗೆ’ ತುಳು ಕವನ ಸಂಕಲನ ಬಿಡುಗಡೆಗೊಳಿಸಿ ಡಾ.ಪೆರ್ಲ

Dakshina Kannada

ಮಂಗಳೂರು: ಸಾಹಿತ್ಯ ದೈನಂದಿನ ಬದುಕನ್ನು ಮೌಲ್ಯಾತ್ಮಕ, ಚಿಂತನಾತ್ಮಕವಾಗಿ ಬೆಳೆಸುತ್ತದೆ. ತುಳು ಸಾಹಿತ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಪ್ರಯೋಗಗಳಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಾಹಿತಿ, ಕವಿ ಡಾ.ವಸಂತಕುಮಾರ ಪೆರ್ಲ ಹೇಳಿದರು.

ಸಾಹಿತ್ಯಾ ಪ್ರಕಾಶನದ ಆಶ್ರಯದಲ್ಲಿ ವಿಜಯವಾಣಿ ಹಿರಿಯ ಉಪಸಂಪಾದಕ ರಾಜೇಶ್ ಶೆಟ್ಟಿ ದೋಟ ಅವರ ‘ಮುಗದಾರಗೆ’ ತುಳು ಕವನ ಸಂಕಲನವನ್ನು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಎಲ್ಲ ವಿಧದಲ್ಲೂ ಒಳಗೊಂಡು ಬದುಕನ್ನು ಔನ್ನತ್ಯಕ್ಕೇರಿಸಬೇಕು. ವಾಚ್ಯವಾಗಿರದೆ ಸೂಚ್ಯವಾಗಿರುವ ಕವಿತೆಗಳು ಪ್ರಭಾವಶಾಲಿ. ತುಳು ಸಾಹಿತ್ಯವನ್ನು ಕಲಾತ್ಮಕವಾಗಿ ರಚಿಸುವತ್ತ ಶ್ರಮಿಸಬೇಕು. ಕೇವಲ ಭಾವನಾತ್ಮಕವಾಗಿ ಸಂವಹನ ರೂಪದಲ್ಲಿರುವ ಕವಿತೆ ಪರಿಣಾಮಕಾರಿಯಾಗದು. ಇಂದು ಕನ್ನಡ ಹಾಗೂ ಇತರ ಭಾಷೆಗಳಿಗೆ ಸರಿಸಮಾನವಾದ ಮೌಲ್ಯಯುತ ಕೃತಿಗಳು ತುಳುವಿನಲ್ಲಿ ಹೊರಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಆರ್‌ಪಿಎಲ್ ತರಬೇತಿ ವಿಭಾಗ ಮುಖ್ಯಸ್ಥೆ ವೀಣಾ ಟಿ.ಶೆಟ್ಟಿ ಮಾತನಾಡಿ, ಸಾಹಿತ್ಯದ ಓದು ಪ್ರಸ್ತುತದಲ್ಲಿ ಬಹಳ ಮುಖ್ಯ. ಸಾಹಿತ್ಯವೆಂದರೆ ಮನರಂಜನೆಯಷ್ಟೇ ಅಲ್ಲ. ವಿಷಯಗಳನ್ನು ತಿಳಿಯಪಡಿಸುವ ಜವಾಬ್ದಾರಿ ಸಾಹಿತಿಗಿದೆ. ವರ್ತಮಾನದ ವಿಷಯಗಳನ್ನು ಸೂಕ್ಷ್ಮವಾಗಿ ಹೇಳುವ ಕೌಶಲ ಸಿದ್ಧಿಸಿದರೆ ಅರ್ಥಪೂರ್ಣ ಕಾವ್ಯ ರಚನೆ ಸಾಧ್ಯ ಎಂದರು.

ಸಾಹಿತಿ, ಪ್ರಾಧ್ಯಾಪಕ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು. ಕೃತಿಕಾರ ರಾಜೇಶ್ ಶೆಟ್ಟಿ ದೋಟ ಉಪಸ್ಥಿತರಿದ್ದರು. ವಿಜಯವಾಣಿ ಹಿರಿಯ ವರದಿಗಾರ ಪಿ.ಬಿ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

ಬದುಕನ್ನು ವರ್ಣರಂಜಿತಗೊಳಿಸಲು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಅಗತ್ಯ. ವ್ಯಕ್ತಿತ್ವವನ್ನು ಬದಲಾಯಿಸಬಲ್ಲ ಸಾಧ್ಯತೆ ಸಾಹಿತ್ಯಕ್ಕಿದೆ. ಓದುವಿಕೆಯೂ ಸಾಹಿತ್ಯದ ಕೈಂಕರ್ಯ. ರಮ್ಯತೆ, ಸಂದೇಶ, ವೈಚಾರಿಕತೆ ಸಾಹಿತ್ಯದಲ್ಲಿದ್ದಾಗ ಅದು ಓದುಗನನ್ನು ಮುಟ್ಟುತ್ತದೆ. - ವೀಣಾ ಟಿ.ಶೆಟ್ಟಿ ತರಬೇತಿ ವಿಭಾಗ, ಎಂಆರ್‌ಪಿಎಲ್