ಜಿಲ್ಲೆ

ನೆಟ್ಟಣಿಗೆ ಮುಡ್ನೂರು ವಿಶೇಷ ಚೇತನರ ಗ್ರಾಮ ಸಭೆ

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಆರ್‌ಡಬ್ಲುೃ ವಿಕಲ ಚೇತನರ ಮನೆಗಳಿಗೆ ಭೇಟಿ ನೀಡುತ್ತಿಲ್ಲ. ಕೆಲವೊಂದು ಮನೆಗಳಿಗೆ ಮಾತ್ರ ಭೇಟಿ ನೀಡುತ್ತಾರೆ. ಕಚೇರಿಯಲ್ಲಿಯೂ ಸರಿಯಾಗಿ ಇರುವುದಿಲ್ಲ ಎಂಬ ಅಸಮಾಧಾನ ನೆಟ್ಟಣಿಗೆ ಮುಡ್ನೂರು ಗ್ರಾಪಂ ಆವರಣದಲ್ಲಿ ಗುರುವಾರ ನಡೆದ ವಿಶೇಷ ಚೇತನರ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.

ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣೆ, ಸಮಾನ ಅವಕಾಶ, ಪೂರ್ಣ ಭಾಗವಹಿಸುವಿಕೆ, ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮದ ವಿಶೇಷ ಚೇತನರ ಗ್ರಾಮ ಸಭೆ ನಡೆಯಿತು. ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ವನಿತಾ ನೋಡಲ್ ಅಧಿಕಾರಿಯಾಗಿ ಸಭೆ ನಡೆಸಿದರು. ಗ್ರಾಪಂ ವ್ಯಾಪ್ತಿಯ ವಿಶೇಷ ಚೇತನ ಫಲಾನುಭವಿ, ವಿಶೇಷ ಚೇತನರ ಪಾಲಕರು ಅಭಿಪ್ರಾಯ ಮಂಡಿಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಆರ್‌ಡಬ್ಲುೃ ವಿಶೇಷ ಚೇತನ ಫಲಾನುಭವಿಗಳ ಮನೆಗೆ ಭೇಟಿ ನೀಡುತ್ತಿಲ್ಲ. ಕಚೇರಿಯಲ್ಲಿ ಸರಿಯಾಗಿ ಇರುವುದಿಲ್ಲ ಎಂಬ ದೂರು ನಮಗೆ ಬರುತ್ತಿವೆ ಎಂದು ಗ್ರಾಪಂ ಸದಸ್ಯ ಇಬ್ರಾಹಿಂ ಹೇಳಿದರು.ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ 160 ಮಂದಿ ವಿಶೇಷ ಚೇತನ ಫಲಾನುಭವಿಗಳಿದ್ದರೂ ಅವರು ಕೆಲವೇ ಮನೆಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ ಎಂದು ನಳಿನಿ ರೈ ದೂರಿದರು. ಗ್ರಾಮದ ಎಆರ್‌ಡಬ್ಲುೃ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ನಮಗೂ ಬಂದಿದೆ ಎಂದು ಪಿಡಿಓ ವಿದ್ಯಾಧರ್ ಕೆ.ಎನ್. ಹೇಳಿದರು.

ಇದೇ ರೀತಿಯ ದೂರು ನಮ್ಮಲ್ಲಿಗೂ ಬಂದಿದೆ. ಮುಂದೆ ಈ ರೀತಿ ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನೋಡಲ್ ಅಧಿಕಾರಿ ಎಚ್ಚರಿಕೆ ನೀಡಿದರು.

ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ ಮಾತನಾಡಿ, ಸರ್ಕಾರ ವಿಶೇಷ ಚೇತನರಿಗೂ ಸಮಾನ ಅವಕಾಶ ನೀಡುತ್ತಿದೆ. ಗ್ರಾಮಮಟ್ಟದ ಅಧಿಕಾರಿ ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಿದರೆ ಮಾತ್ರ ವಿಶೇಷಚೇತನರಿಗೆ ಸವಲತ್ತು ಸಿಗಲು ಸಾಧ್ಯ ಎಂದರು.

ಪುತ್ತೂರು ವಿಕಲಚೇತನ ಸೇವಾಕೇಂದ್ರದ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಶೇಷ ಚೇತನರಿಗೆ ಒದಗಿಸುವ ಸೌಲಭ್ಯಗಳ ಮಾಹಿತಿ ನೀಡಿದರು. ಸ್ವಾಗತಿಸಿದ ಪಿಡಿಒ ವಿದ್ಯಾಧರ ಕೆ.ಎನ್. ಪಂಚಾಯಿತಿ ವತಿಯಿಂದ ವಿಶೇಷ ಚೇತನ ಫಲಾನುಭವಿಗಳಿಗೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ನೆಟ್ಟಣಿಗೆ ಮುಡ್ನೂರು ಗ್ರಾಮದ ಎಆರ್‌ಡಬ್ಲುೃ ಬಾಲಕೃಷ್ಣ ಪಾಟಾಳಿ ವಂದಿಸಿದರು.