ಜಿಲ್ಲೆ

ಮೂಡಿಗೆರೆ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ಮೂಡಿಗೆರೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ 6ನೇ ವಾರ್ಡ ಸದಸ್ಯೆ ಗೀತಾ ಅಜಿತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ 8ನೇ ವಾರ್ಡ ಕಾಂಗ್ರೆಸ್ ಸದಸ್ಯ ಹೊಸಕೆರೆ ರಮೇಶ್ ಆಯ್ಕೆಯಾಗಿದ್ದಾರೆ.
ಪಪಂ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗೀತಾ ಅಜಿತ್ ಕುಮಾರ್, ಬಿಜೆಪಿಯಿಂದ ಆಶಾ ಮೋಹನ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾಗಿತ್ತು. ಬಿಜೆಪಿಯಲ್ಲಿ ಮೀಸಲು ಅಭ್ಯರ್ಥಿಗಳು ಇಲ್ಲದಿರುವುದರಿಂದ ಕಾಂಗ್ರೆಸ್‌ಸದಸ್ಯ ಹೊಸಕೆರೆ ರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿದರು.
ಒಟ್ಟು 11 ಸದಸ್ಯ ಬಲದ ಪಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್‌ನ 5 ಸದಸ್ಯರಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್‌ನ 5 ಸದಸ್ಯರು ಬಿಜೆಪಿ ಸದಸ್ಯ ಜೆ.ಬಿ.ಧರ್ಮಪಾಲ್ ಹಾಗೂ ಶಾಸಕಿ ನಯನಾ ಮೋಟಮ್ಮ ಅವರ ಮತ ಸೇರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅಜಿತ್ ಕುಮಾರ್7 ಮತ ಪಡೆದು ಜಯಗಳಿಸಿದರೆ ಆಶಾ ಮೋಹನ್ 5 ಮತ ಪಡೆದು ಪರಾಭವಗೊಂಡರು.