ಕೊಟ್ಟೂರು: ಪಟ್ಟಣದ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಇಲ್ಲಿನ ಹ್ಯಾಳ್ಯಾ ರಸ್ತೆಯಲ್ಲಿನ ಬನ್ನಿ ಮರಕ್ಕೆ ಆಗಮಿಸಿ ಅತ್ಯಂತ ಸಂಭ್ರಮ ಸಡಗರದಿಂದ ಶನಿವಾರ ಬನ್ನಿ ಮುಡಿದರು.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಶನಿವಾರ ಮಠದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ದೇವಸ್ಥಾನದಿಂದ ಹೊರಟ ಪಲ್ಲಕ್ಕಿಯಲ್ಲಿ ಅಕ್ಬರ್ ಬಾದಶಾ ಕೊಟ್ಟೂರೇಶ್ವರ ಸ್ವಾಮಿಗೆ ಕೊಟ್ಟಿದ್ದನೆಂಬ ಪ್ರತೀತಿ ಇರುವ ಖಡ್ಗ(ಫಿರಂಗಿ)ಯನ್ನು ಬನ್ನಿ ಪತ್ರಿಯೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಸಮಳ, ನಂದಿ ಧ್ವಜ, ಮೇಳದ ಮೂಲಕ ಬನ್ನಿ ಮರಕ್ಕೆ ಆಗಮಿಸಿತು.
ಸಂಪ್ರದಾಯ ಪ್ರಕಾರ ಬನ್ನಿ ಮರಕ್ಕೆ ಖಡ್ಗವನ್ನು ಸ್ಪರ್ಶಿಸಿ ನಂತರ ಬನ್ನಿ ಪತ್ರಿಯೊಂದಿಗೆ ಪಲ್ಲಕ್ಕಿಯಲ್ಲಿ ಇರಿಸಲಾಯಿತು. ನಂತರ ಆಯಾಗಾರರಿಗೆ ಮತ್ತು ಭಕ್ತರಿಗೆ ಪರಸ್ಪರ ಬನ್ನಿ ಕೊಟ್ಟು ಬಂಗಾರದಂಗೆ ಇರೋಣವೆಂದು ಶುಭಕೋರಿದರು. ಸ್ನೇಹಿತರು ಬನ್ನಿ ಕೊಟ್ಟು ಶುಭಕೋರಿದರು. ಹಿರಿಯರಿಗೆ ಕಿರಿಯರು ಕೊಟ್ಟು ಆಶೀರ್ವಾದ ಪಡೆದರು. ಜಂಗಮ ಸ್ವಾಮಿಗಳಿಗೆ ಭಕ್ತರು ಮನ್ನಿ ಕೊಟ್ಟು ಆಶೀರ್ವಾದ ಪಡೆದರು.