ಮುಧೋಳ: ಮಾಜಿ ದೇವದಾಸಿಯರಿಗೆ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಹಾಗೂ ಜಿಲ್ಲಾ ದೇವದಾಸಿ ಪುನರ್ವಸತಿ ಕೇಂದ್ರದಿಂದ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದನ್ನು ಸದುಪಯೋಗ ಪಡೆದು ಸುಸಂಸ್ಕೃತ ಬದುಕಿನತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ದೇವದಾಸಿ ಪುನರ್ವಸತಿ ಕೇಂದ್ರದ ಜಿಲ್ಲಾ ಯೋಜನಾ ಅನುಷ್ಠಾನಾಧಿಕಾರಿ ಮಹಾದೇವಿ ಮದರಖಂಡಿ ತಿಳಿಸಿದರು.
ತಾಲೂಕಿನ ಉತ್ತೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಕಟ್ಟಕಡೆಯ ಮಾಜಿ ದೇವದಾಸಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಮಾಸಿಕ ಭತ್ಯೆ, ವಸತಿ ಯೋಜನೆ, ಭೂ ಒಡೆತನ ಯೋಜನೆ, ಸಾಲ ಸೌಲಭ್ಯ ಹೀಗೆ ಹಲವಾರು ರೀತಿಯ ಯೋಜನೆಗಳ ಸೌಲಭ್ಯವನ್ನು ನೀಡುತ್ತಿದೆ. ಸ್ವಾವಲಂಬಿಗಳಾಗಿ ತಮ್ಮ ಬದುಕನ್ನು ಪರಿವರ್ತಿಸಿಕೊಳ್ಳಬೇಕು ಎಂದು ಹೇಳಿದರು.
ವೈದ್ಯಾಧಿಕಾರಿ ಡಾ.ಚಂದ್ರಶೇಖರ ಹಿರೇಮಠ, ಕಿರಿಯ ಆರೋಗ್ಯ ಸಹಾಯಕಿ ಭಾಗ್ಯಲಕ್ಷ್ಮೀ ಇಂಗಳಗಿ ಮಾತನಾಡಿ, ಉತ್ತಮ ಆರೋಗ್ಯ ಪಡೆದುಕೊಳ್ಳಲು ಉತ್ತಮ ಆಹಾರ, ಶುದ್ಧ ಕುಡಿಯುವ ನೀರು, ತರಕಾರಿ ಸೇವಿಸಬೇಕು ಎಂದು ಸಲಹೆ ನೀಡಿದರು.
ದ್ರೌಪತಿ ಒಂಟಗೋಡಿ, ಹೊನ್ನವ್ವ ಮಾಂಗ, ಬಾಗವ್ವ ಟಕ್ಕಳಕಿ, ರುಕ್ಮವ್ವ ಹಾದಿಮನಿ, ಮಂಜುಳಾ ಲಚ್ಚವ್ವಗೋಳ, ಮಾಜಿ ದೇವದಾಸಿ ಮಹಿಳೆಯರ ಮಕ್ಕಳಾದ ಶಶಿಕುಮಾರ ಟಕ್ಕಳಕಿ, ಮಂಜುನಾಥ ಟಕ್ಕಳಕಿ, ರಮೇಶ ಏಳಂಟಿ ಇತರರು ಪಾಲ್ಗೊಂಡಿದ್ದರು.
ಉಚಿತ ಔಷಧಗಳ ವಿತರಣೆ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಮಾಜಿ ದೇವದಾಸಿಯರಾದ ರೇಣುಕಾ ಹಲಗಿ, ಚಂದ್ರವ್ವ ಹಾದಿಮನಿ, ಅವರನ್ನು ಸನ್ಮಾನಿಸಲಾಯಿತು. ಐವತ್ತಕ್ಕೂ ಹೆಚ್ಚು ಮಾಜಿ ದೇವದಾಸಿ ಮಹಿಳೆಯರ ಕರೋನಾ ಪರೀಕ್ಷೆ, ದಂತ ಪರೀಕ್ಷೆ, ಬಿ.ಪಿ., ಮಧುಮೇಹ ಪರೀಕ್ಷೆ, ಎಚ್.ಐ.ವಿ. ಹಾಗೂ ಕಣ್ಣಿನ ಪರೀಕ್ಷೆ ಮಾಡಲಾಯಿತು. ಮಹಿಳೆಯರಿಗೆ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು.