ಮುಧೋಳ: ಮಂದಿರ ನಿರ್ಮಾಣವೆಂದರೆ ಕೇವಲ ನಿರ್ಜೀವ ಕಟ್ಟಡವೊಂದರ ನಿರ್ಮಾಣವಲ್ಲ. ದೇಶದ ನೂರಾರು ಕೋಟಿ ಹಿಂದುಗಳ ಪುನರುತ್ಥಾನದ ಸಂಕೇತ, ರಾಷ್ಟ್ರ ನಿರ್ಮಾಣದ ಸಂಕೇತ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಂಘಟನೆ ಕಾರ್ಯದರ್ಶಿ ಮನೋಹರ ಮಠದ ತಿಳಿಸಿದರು.
ರಾಮ ಮಂದಿರ ಕಟ್ಟಡ ನಿರ್ಮಾಣ ನಿಧಿ ಸಂಗ್ರಹ ನಿಮಿತ್ತ ತಾಲೂಕಿನ ಶಿರೋಳದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಸಂತ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರ ಹಣ ವಿನಿಯೋಗವಾಗಬೇಕೆಂಬ ಏಕೈಕ ಉದ್ದೇಶದಿಂದ ಒಬ್ಬ ಕನಿಷ್ಠ ದುಡಿಮೆಯ 10 ರೂ. ನಿಂದ ಹಿಡಿದು ಅವರ ದುಡಿಮೆಗನುಸಾರ ನಿಧಿ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಭಾವನೆಗಳನ್ನು ಜೋಡಿಸುವ ಕೇಂದ್ರವಾಗಲಿದೆ. ಇಡಿ ಜಗತ್ತಿನಲ್ಲಿರುವ ಭಾರತೀಯರನ್ನು ಒಂದುಗೂಡಿಸಿದಂತಾಗುತ್ತದೆ ಎಂದು ಹೇಳಿದರು.
ಶಿರೋಳ ರಾಮಾರೂಢ ಮಠದ ಮಠಾಧೀಶ, ಜಿಲ್ಲಾ ಮಠಾಧೀಶರ ಸಂಘದ ಕಾರ್ಯದರ್ಶಿ ಶಂಕರಾರೂಢ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತೀಯರ ಹೆಮ್ಮೆಯ ಈ ಮಂದಿರ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸುವ ಭಾಗ್ಯ ದೊರೆತಿರುವುದು ನಿಜಕ್ಕೂ ನಮಗೆಲ್ಲ ಹೆಮ್ಮೆ ಅನಿಸುತ್ತಿದೆ. ಹಿಂದು ಧರ್ಮ ಶ್ರೀರಾಮಮಂದಿರ ನಿರ್ಮಾಣ ಮಾಡುವುದರೊಂದಿಗೆ ಮತ್ತೊಮ್ಮೆ ಪುನರುತ್ಥಾನಗೊಳ್ಳಲಿದೆ. ಜಗತ್ತಿಗೆ ಒಂದು ಸಂದೇಶ ರವಾನಿಸಲಿದೆ ಎಂದು ತಿಳಿಸಿದರು.
ಜನವರಿ 15ರಂದು ಮುಧೋಳ ನಗರದಲ್ಲಿ ಕಟ್ಟಡ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗುವುದು. ನಂತರ ಜನವರಿ 17 ರಂದು ಒಂದೇ ದಿನದಲ್ಲಿ ಮುಧೋಳದಲ್ಲಿ ನಿಧಿ ಸಂಗ್ರಹಿಸಲಾಗುವುದು. ಜಿಲ್ಲೆಯಲ್ಲಿ ೆಬ್ರವರಿ 5 ರವರೆಗೆ ಒಂದೊಂದು ಗ್ರಾಮಗಳಲ್ಲಿ ನಿಧಿ ಸಂಗ್ರಹ ನಡೆಯಲಿದೆ ಎಂದರು.
ಯಡಹಳ್ಳಿ-ಇಂಗಳಗಿಯ ಅಡವಿಮಠದ ಚಂದ್ರಶೇಖರ ಸ್ವಾಮಿಗಳು, ಹಿಪ್ಪರಗಿ ಸಂಗಮೇಶ್ವರ ಆಶ್ರಮದ ಪ್ರಭುಜಿ ಮಹಾರಾಜರು, ಕುಂಚನೂರು ಕಂಬಳಿ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ರೂಗಿ ಅಡವಿ ಆಶ್ರಮದ ನಿತ್ಯಾನಂದ ಸ್ವಾಮೀಜಿ ಹಾಗೂ ಜಮಖಂಡಿ ವಿಭಾಗದ 17 ಮಠಾಧೀಶರು ಭಾಗವಹಿಸಿದ್ದರು.
ಉಮೇಶ ಸಿದ್ಧರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ, ಬಾಬು ಹೊಸಕೋಟಿ, ಸಿದ್ದು ಚಿಕದಾನಿ, ಶಂಕರ ಹಳಿಂಗಳಿ, ಮಲ್ಲು ಕಾಬಿ, ಶ್ರೀನಿವಾಸ ಸತ್ತೀಕರ, ಶ್ರೀನಿವಾಸ ಬಿರಾದಾರ ಪಾಟೀಲ ಸೇರಿ ಹಲವಾರು ಮುಖಂಡರು ಭಾಗವಹಿಸಿದ್ದರು.
EndFragment