ಮುಧೋಳ: ಪರಿಶಿಷ್ಟ ಜಾತಿ, ಪಂಗಡದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಎಂ, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಕಿಶೋರಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯಡಿ 75 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಮುಧೋಳ ಮತ್ತು ಮಂಟೂರ ತಾಂಡಾಗಳಲ್ಲಿ ತಲಾ 10 ಲಕ್ಷ ರೂ. ಅನುದಾನದಲ್ಲಿ ಸೇವಾಲಾಲ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
6 ಲಕ್ಷ ರೂ. ವೆಚ್ಚದಲ್ಲಿ ಮುಧೋಳ ಸೇವಾಲಾಲ್ ಸಾಂಸ್ಕೃತಿಕ ಕೇಂದ್ರ, 10 ಲಕ್ಷ ರೂ. ವೆಚ್ಚದಲ್ಲಿ ಮಂಟೂರ ಅಂಗನವಾಡಿ ಕೇಂದ್ರ, 10 ಲಕ್ಷ ರೂ. ವೆಚ್ಚದ ಕಿಶೋರಿ ಪ.ಜಾ ಕಾಲನಿಯ ಸಿಸಿ ರಸ್ತೆ ಕಾಮಗಾರಿ, 40 ಲಕ್ಷ ರೂ. ವೆಚ್ಚದ ಮೆಳ್ಳಿಗೇರಿ ಪ.ಜಾ ಕಾಲನಿ ಸಿಸಿ ರಸ್ತೆ ಕಾಮಗಾರಿ, 140 ಲಕ್ಷ ರೂ. ವೆಚ್ಚದ ಹಲಗಲಿ ಪ.ಜಾ ಕಾಲನಿಯ ಸಿಸಿ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಬುದ್ನಿ ಕೆ.ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಜಿಪಂ ಸದಸ್ಯರಾದ ಭೀಮನಗೌಡ ಪಾಟೀಲ, ತಾಪಂ ಸದಸ್ಯ ಎಂ.ಎಸ್. ಡೋಣಿ, ಬಿ.ಎಚ್. ಪಂಚಗಾಂವಿ, ಕೆ.ಆರ್. ಮಾಚಪ್ಪನವರ, ತಹಸೀಲ್ದಾರ್ ಸಂಗಮೇಶ ಬಾಡಗಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ ಕೋರಡ್ಡಿ, ಲೋಕೋಪಯೋಗಿ ಇಲಾಖೆ ಎಇಇ ಸೋಮಶೇಖರ ಸಾವನ ಹಾಗೂ ಸ್ಥಳೀಯ ಮುಖಂಡರು ಮತ್ತು ಗಣ್ಯರು ಇದ್ದರು.
EndFragment