ಜಿಲ್ಲೆ

ಉಳಿಮೇಶ್ವರದಲ್ಲಿ ನೀರಿಗಾಗಿ ಪರದಾಟ

ಮುದಗಲ್: ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಪರದಾಡುವಂತಾಗಿದೆ.

ಗ್ರಾಮದ ಒಂದು ಕೊಳವೆ ಬಾವಿಯಿಂದ ನೀರನ್ನು ಸಂಗ್ರಹಣಾ ತೊಟ್ಟಿಗೆ ಸಂಗ್ರಹಿಸಿ ಅಲ್ಲಿಂದ ನಳಗಳಿಗೆ ಪೂರೈಕೆ ಮಾಡಲಾಗುತ್ತದೆ. ಕೊಳವೆಬಾವಿಯಲ್ಲಿ ಅಂತರ್ಜಲ ಬತ್ತಿದ ಪರಿಣಾಮ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಎಸ್‌ಸಿ ಮತ್ತು ಎಸ್‌ಟಿ ಕಾಲನಿ ಮನೆಗಳಲ್ಲಿ ಅಳವಡಿಸಿದ ನಳಗಳಿಗೆ ನೀರು ಸರಬರಾಜಾಗುತ್ತಿಲ್ಲ. ಬೇಸಿಗೆಯ ಬಿಸಿಲಿನ ಝಳಕ್ಕೆ ನೀರಿನ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಕಾರಣ ಮಹಿಳೆಯರಿಗೆ ನೀರು ತರುವದೇ ದೊಡ್ಡ ಕಾಯಕವಾಗಿದೆ.

ನಾಗಲಾಪೂರ ಗ್ರಾಪಂ ವ್ಯಾಪ್ತಿಯ ಉಳಿಮೇಶ್ವರ ಗ್ರಾಮದ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಪಂ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಗ್ರಾಮದಲ್ಲಿ ಕೊಡ ಹಿಡಿದು ಮಹಿಳೆಯರು ನೀರಿಗಾಗಿ ಹುಡುಕಾಡುವುದು ಸಾಮಾನ್ಯವಾಗಿದೆ. ಜನ ಜಾನುವಾರುಗಳಿಗೂ ಹನಿ ನೀರು ಸಿಗದಂತಾಗಿದೆ ಎಂದು ಮಹಿಳೆಯರಾದ ನಾಗಮ್ಮ ಗೌಂಡಿ, ಶಾಂತಮ್ಮ ನಾಯಕ, ಶಂಕ್ರಮ್ಮ ಗೋಳು ತೋಡಿಕೊಂಡಿದ್ದಾರೆ.

ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಒಂದು ವಾರದಲ್ಲಿ ಸಂಬಂಧಿಸಿದ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು, ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಲಾಗುವುದು ಎಂದು ಉಳಿಮೇಶ್ವರ ಗ್ರಾಮದ ಮಹಿಳೆಯರು ಎಚ್ಚರಿಸಿದ್ದಾರೆ.