ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗೆ ಸಚಿವ ಆರ್.ಅಶೋಕ ಸೂಚಿಸಿರುವ ಪತ್ರದ ಪ್ರತಿ. & ಡಿಎಸ್.ಹೂಲಗೇರಿ 
ಜಿಲ್ಲೆ

ಮುದಗಲ್ ತಾಲೂಕು ರಚನೆ ಮನವಿಗೆ ಸಚಿವರ ಸ್ಪಂದನೆ, ಈ ಭಾಗದ ನಾಗರಿಕರಲ್ಲಿ ಹೆಚ್ಚಿದ ಆಶಾಭಾವನೆ

ಮುದಗಲ್: ಮುದಗಲ್ ತಾಲೂಕು ಕೇಂದ್ರ ರಚನೆಗೆ ಶಾಸಕ ಡಿ.ಎಸ್. ಹೂಲಗೇರಿ ಮನವಿಗೆ, ‘ಕಂದಾಯ ಸಚಿವ ಆರ್.ಅಶೋಕ ಅಧಿವೇಶನದಲ್ಲಿ ಪ್ರಸ್ತಾವನೆ ಮಂಡಿಸುವಂತೆ ಸೂಚಿಸಿರುವುದು’ ಈ ಭಾಗದ ನಾಗರಿಕರಿಗೆ ಆಶಾಭಾವ ಮೂಡಿಸಿದೆ.

ಪಟ್ಟಣದ ವಿಸ್ತಾರತೆ ಮತ್ತು ನಾಗರಿಕ ಸವಲತ್ತುಗಳ ಬಗ್ಗೆ ಸಚಿವರಿಗೆ ಹೋರಾಟ ಸಮಿತಿ ಮುಖಂಡರು ಹಾಗೂ ವಿವಿಧ ಸಂಘಟನೆಗಳ ನಿಯೋಗದೊಂದಿಗೆ ಶಾಸಕರು ಮನವಿ ಸಲ್ಲಿಸಿದ್ದರು. ಪತ್ರಕ್ಕೆ ಸ್ಪಂದಿಸಿರುವ ಸಚಿವರು, ‘ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವನೆ ಮಂಡಿಸಲು’ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುದಗಲ್ ತಾಲೂಕು ಕೇಂದ್ರವಾಗಲು ಸರ್ಕಾರದ ಚಟುವಟಿಕೆ ನಡೆಯಲಿವೆ ಎಂಬುದು ನಾಗರಿಕರ ಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ತಾಲೂಕು ಕೇಂದ್ರ ರಚನೆ ಬಗ್ಗೆ ಪ್ರಶ್ನಾವಳಿಯಲ್ಲಿ ಚರ್ಚೆಗೆ ಬರಲಿದ್ದು, ಏನಾಗುತ್ತೋ ಕಾದು ನೋಡಬೇಕಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುದಗಲ್ ತಾಲೂಕು ಕೇಂದ್ರ ಹಾಗೂ ಸಾರಿಗೆ ಬಸ್ ಡಿಪೊ ಮಂಜೂರಾತಿಗೆ ಮುಖ್ಯಮಂತ್ರಿಗೆ ಮನವೊಲಿಸಲಾಗಿತ್ತು. ಆದರೆ, ಬದಲಾದ ಸರ್ಕಾರದಿಂದ ಬೇಡಿಕೆ ಈಡೇರಲಿಲ್ಲ. ಈಗಾಗಲೇ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ಬೇಗ ಉತ್ತರ ದೊರೆಯುವುದರ ಜತೆಗೆ ಬೇಡಿಕೆಯೂ ಈಡೇರಲಿದೆ ಎಂಬ ವಿಶ್ವಾಸವಿದೆ.| ಡಿ.ಎಸ್.ಹೂಲಗೇರಿ, ಶಾಸಕ ಲಿಂಗಸುಗೂರು