ಗುಡಿಹಾಳ ಗ್ರಾಮದ ಹೊರವಲಯದಲ್ಲಿ ಕೃಷಿ ಜಮೀನಿಗೆ ಮಳೆ ನೀರು ನುಗ್ಗಿರುವುದು. 
ಜಿಲ್ಲೆ

ಜಮೀನಿಗೆ ನುಗ್ಗಿದ ಮಳೆ ನೀರು - ರಾಯಚೂರು-ಬೆಳಗಾವಿ ಎನ್‌ಎಚ್ ಕಾಮಗಾರಿಯಿಂದ ಅವಾಂತರ

ಮುದಗಲ್: ಕಳೆದ ಆರು ತಿಂಗಳಿಂದ ನಿಮಾರ್ಣವಾಗುತ್ತಿರುವ ರಾಯಚೂರು-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಮಳೆ ನೀರು ಮುಂದೆ ಹರಿಯದೆ ಹೊಲಗಳಿಗೆ ನುಗುತ್ತಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ.

ರಾಯಚೂರು-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯು ಗುಡಿಹಾಳ ಗ್ರಾಮದ ಪಕ್ಕದಲ್ಲಿಯೇ ಹಾದು ಹೋಗಿದ್ದು, ಹಲವು ತಿಂಗಳಿಂದ ಕಾಮಗಾರಿ ಸಾಗಿದೆ. ಮೊದಲ ಹಂತದಲ್ಲಿ ಮೆಟಲಿಂಗ್ ಮಾಡಲಾಗುತ್ತಿದೆ.

ಇತ್ತ ಗುಡಿಹಾಳ ಗ್ರಾಮದ ರೈತರು ಜಮೀನು ಹದಗೊಳಿಸಿ, ಸಾಲ ಮಾಡಿ ಬೀಜ-ಗೊಬ್ಬರ ಖರೀದಿಸಿ ಜೂನ್-ಜುಲೈನಲ್ಲಿ ಬಿತ್ತನೆ ಮಾಡಿದ್ದಾರೆ. ಆದರೆ, ನಿರಂತರ ಮಳೆಯಿಂದಾಗಿ ನೀರು ಸಮರ್ಪಕವಾಗಿ ಸಾಗದೆ ಇಳಿಜಾರು ಹೊಲಗಳಿಗೆ ರಸ್ತೆ ಅಡ್ಡಲಾಗಿರುವ ಕಾರಣ ನೂರಾರು ಎಕರೆ ಭೂಮಿಯಲ್ಲಿ ಬೆಳೆಯಲಾದ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ನೀರು ಪಾಲಾಗಿವೆ.

ಜಮೀನುಗಳಿಗೆ ತೆರಳುವ ರಸ್ತೆಗಳು ಕೂಡ ಜಲಾವೃತವಾಗಿವೆ. ಈಗಾಗಲೇ ಭಾರತ ಮಾಲಾ ಯೋಜನೆಯಡಿ ಕೈಗೊಂಡ ಕಾಮಗಾರಿಯಿಂದ ಜಮೀನು ಕಳೆದುಕೊಂಡಿರುವ ರೈತರು ಈಗಿರುವ ಅಲ್ಪ-ಸ್ವಲ್ಪ ಜಮೀನು ಜಲಾವೃತವಾಗುತ್ತಿರುವುದರಿಂದ ಬೆಳೆ ನಷ್ಟದ ಭೀತಿ ಎದುರಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

======

ಭಾರತ ಮಾಲಾ ಯೋಜನೆಗೆ ರೈತರು ಕಡಿಮೆ ದರಕ್ಕೆ ಹೊಲಗಳನ್ನು ನೀಡಿದ್ದಾರೆ. ಈಗ ಮಳೆ ನೀರಿನ ಅವಾಂತರದಿಂದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಕಂಗಾಲಾಗಿದ್ದಾರೆ. ಅಧಿಕಾರಿಗಳು ರೈತರಿಗೆ ನಷ್ಟ ಪರಿಹಾರ ನೀಡಬೇಕು.

> ಈರಣ್ಣ ಅಂಕಸದೊಡ್ಡಿ, ಗುಡಿಹಾಳ ನಿವಾಸಿ

=====

ಇತ್ತೀಚೆಗೆ ಗುಡಿಹಾಳ ಗ್ರಾಮದ ಕೆಲ ರೈತರು ರಸ್ತೆ ಹೆದ್ದಾರಿ ಕಾಮಗಾರಿಯಿಂದ ಆಗಿರುವ ಬೆಳೆ ನಷ್ಟದ ಬಗ್ಗೆ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳಿಗೆ ಸೂಚಿಸಿ, ವರದಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು.

> ಬಸವಣ್ಣೆಪ್ಪ ಕಲಶೆಟ್ಟಿ, ಎಸಿ, ಲಿಂಗಸಗೂರು