ಮುದಗಲ್: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ ಎಂದು ಸಂತೆಕೆಲ್ಲೂರಿನ ಗುರುಬಸವ ಶ್ರೀಗಳು ಹೇಳಿದರು.
ಲೆಕ್ಕಿಹಾಳ ಗ್ರಾಮದ ಶ್ರೀ ಮೌನೇಶ್ವರ ಜಾತ್ರೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಳೆದ 9 ವರ್ಷಗಳಿಂದ ಅವಳಿ ಗ್ರಾಮಗಳಲ್ಲಿ ಕೈಗೊಳ್ಳುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಂದುಗೂಡಿ ಶ್ರಮಿಸುತ್ತಿರುವುದು ಶ್ಲಾಘನೀಯ. ವಧು, ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸಿ, ಸಮಾಜಕ್ಕೆ ಆದರ್ಶರಾಗಬೇಕು. ಪ್ರಸ್ತುತ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂಥ ಸತ್ಕಾರ್ಯಕ್ಕೆ ಮುಂದಾಗಬೇಕು ಎಂದರು.
ಹದಿನಾಲ್ಕು ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ಸಾಮೂಹಿಕ ವಿವಾಹಗಳಿಗೆ ದಾನ ನೀಡಿದ ಮಹನೀಯರನ್ನು ಶ್ರೀಗಳು ಸನ್ಮಾನಿಸಿದರು. ಕಳೆದ ವರ್ಷ 7ನೇ, 10 ನೇ ತರಗತಿ, ಪಿಯುಸಿಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ನೌಕರರ ಸಂಘದಿಂದ ಸನ್ಮಾನಿಸಲಾಯಿತು. ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತ, ಮೌನೇಶ್ವರ ಮಠದ ನಾಗೇಂದ್ರ ಸ್ವಾಮಿ, ಪ್ರಮುಖರಾದ ಶರಣಯ್ಯ ಸ್ವಾಮಿ, ಶಶಿಧರ ಸ್ವಾಮಿ, ಕೊಮನೂರಿನ ನಾಗಭೂಷಣ ಹಿರೇಮಠ, ಗ್ರಾನೈಟ್ ಉದ್ಯಮಿ ರಾಜುಗೌಡ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸೌಮ್ಯಾ ಇತರರಿದ್ದರು.