ಹಟ್ಟಿಚಿನ್ನದಗಣಿ: ನಿರಂತರ ಮಳೆಯಿಂದ ಪಟ್ಟಣದ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಜನರು ಓಡಾಡಲು ಭಯಪಡುವ ಸ್ಥಿತಿ ಎದುರಾಗಿದೆ. ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಲ್ಲಿಯೇ ನೀರು ನಿಂತು ಅಧ್ವಾನವಾಗಿ ವಾಹನ ಸಾವರರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಬಸ್ ನಿಲ್ದಾಣ ಬಳಿಯ ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲೆಡೆ ನೀರು ನಿಂತಿರುವುದರಿಂದ ವ್ಯಾಪಾರಸ್ಥರು ಮತ್ತು ಖರೀದಿದಾರರು ಹೈರಾಣಾಗಿದ್ದಾರೆ. ಗಣಿ ಕಾರ್ಮಿಕರ ಕಾಲನಿಯಲ್ಲಿ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ಕೆಸರುಮಯವಾಗಿದ್ದರಿಂದ ಓಡಾಡಿದರೆ ಜಾರಿಬೀಳುವ ಸ್ಥಿತಿ ಇದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ ಸೊಳ್ಳೆಗಳ ಉಪಟಳ ಹೆಚ್ಚಾಗಿದ್ದು, ಮಲೇರಿಯಾ, ಡೆಂಘೆ ಹಾಗೂ ಚಿಕೂನ್‌ಗುನ್ಯಾ ರೋಗ ಭೀತಿ ಕಾಡುತ್ತಿದೆ. ಈಗಾಗಲೇ ಅನೇಕರು ಜ್ವರ, ತಲೆನೋವು, ಮೈಕೈನೋವಿನಿಂದ ಬಳಲುತ್ತಿದ್ದು, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನರ ಆಕ್ರೋಶ: ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಕೇವಲ ಭರವಸೆ ನೀಡುತ್ತಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರು, ಪಪಂ, ಹಟ್ಟಿ ಚಿನ್ನದ ಗಣಿ ಕಂಪನಿ ಹಾಗೂ ಆರೋಗ್ಯ ಇಲಾಖೆ ತಕ್ಷಣವೇ ಚರಂಡಿ ಸ್ವಚ್ಛತೆಗೆ ಮುಂದಾಗಬೇಕು. ರಸ್ತೆ ದುರಸ್ತಿ ಮಾಡಿಸಬೇಕು. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಸಿಂಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆಯಿಂದ ಕೆಲ ವಾರ್ಡ್‌ಗಳಲ್ಲಿ ನೀರು ನಿಂತು ರಸ್ತೆಗಳು ಹಾಳಾಗಿರುವುದು ಗಮನಕ್ಕಿದೆ. ತಕ್ಷಣ ಮರಂ ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗುವುದು. ವಾರ್ಡ್‌ಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಸಿಂಪಡಣೆಗೆ ಕ್ರಮವಹಿಸಲಾಗುವುದು.
ಜಗನ್ನಾಥ ಜೋಶಿ
ಮುಖ್ಯಾಧಿಕಾರಿ, ಹಟ್ಟಿ ಪಪಂ
ಪಪಂ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಪಟ್ಟಣ ಅಭಿವೃದ್ಧಿ ಮರೆತಿದ್ದಾರೆ. ರಸ್ತೆ, ಚರಂಡಿಗಾಗಿ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅನೈರ್ಮಲ್ಯ ಕಾರಣದಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.
ಮಲ್ಲಿಕಾರ್ಜುನ ಚಿತ್ರನಾಳ
ಹಟ್ಟಿ ನಿವಾಸಿ