ಬೆಳಗಾವಿಯ ಹೂವಿನ ಮಾರುಕಟ್ಟೆಯಲ್ಲಿ ಮಾರಾಟವಾಗದ ಹೂವು ಚೆಲ್ಲಿರುವ ರೈತರು. 
ಜಿಲ್ಲೆ

ಕೆಸರುಗದ್ದೆಯಾದ ಹೂವು ಮಾರುಕಟ್ಟೆ

ಬೆಳಗಾವಿ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಭಾನುವಾರ ಮಧ್ಯಾಹ್ನದಿಂದ ಪುನಃ ಜೋರಾಗಿ ರಾತ್ರಿ ತನ್ನ ಅಬ್ಬರ ಮುಂದುವರಿಸಿದೆ.

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳಗಾವಿ ಹಾಗೂ ಖಾನಾಪುರ ತಾಲೂಕಿನ ಭಾಗದಲ್ಲಿ ತೆನೆ ಕಟ್ಟಿದ್ದ ಭತ್ತಕ್ಕೆ ಹಾನಿ ಆತಂಕ ಎದುರಾಗಿದೆ. ಈಗಾಗಲೇ ಸಾಕಷ್ಟು ಮಳೆ ಹೊಡೆತ ತಡೆದುಕೊಂಡಿದ್ದ ಭತ್ತ, ಈಗ ಅಂತಿಮ ಹಂತದಲ್ಲಿಯೂ ತೊಂದರೆಗೆ ಸಿಲುಕುವಂತಾಗಿದೆ.

ಮಳೆಯಿಂದಾಗಿ ಹೂವಿನ ವ್ಯಾಪಾರವೂ ಕುಂಠಿತವಾಗಿದೆ. ಮಾರುಕಟ್ಟೆಗೆ ತರಲಾಗಿದ್ದ ಸಾಕಷ್ಟು ಪ್ರಮಾಣದ ಹೂವು ಮಾರಾಟವಾಗಲಿಲ್ಲ. ಮಾರುಕಟ್ಟೆ ಸಂಪೂರ್ಣ ಕೆಸರುಮಯವಾಗಿದ್ದರಿಂದ ಹೂವು ಖರೀದಿಸಬೇಕಾದ ವ್ಯಾಪಾರಿಗಳು ಹಿಂಜರಿದರು. ಜತೆಗೆ ಹೂವಿನ ಮಾರುಕಟ್ಟೆಗೆ ನೀರು ಸಹ ನುಗ್ಗುತ್ತಿದ್ದು, ಅದನ್ನು ಸರಿಪಡಿಸಬೇಕು ಎಂದು ವ್ಯಾಪಾರಿಗಳು ಮತ್ತು ರೈತರು ಅಳಲು ತೋಡಿಕೊಂಡರು.

ಸಾಕಷ್ಟು ಬೇಡಿಕೆಯಿದ್ದ ಹೂವು ದೀಪಾವಳಿ ಮುಗಿಯುತ್ತಿದ್ದಂತೆಯೇ ದರದಲ್ಲಿ ಕುಸಿತ ಕಂಡಿದೆ. ನಷ್ಟ ಅನುಭವಿಸಿದ ರೈತರು ಮಾರುಕಟ್ಟೆಯಲ್ಲಿ ಕೆಸರಿನ ಮೇಲೆಯೇ ಅಪಾರ ಪ್ರಮಾಣದ ಹೂವು ಚೆಲ್ಲಿ ಮನೆಗಳಿಗೆ ವಾಪಸ್ಸಾದರು.