ಮೈಸೂರು: ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಷ್ಟು ಬದುಕನ್ನು ಸರಳವಾಗಿ ತೆರೆದಿಡುವವರು ಮತೊಬ್ಬರಿಲ್ಲ ಲೇಖಕಿ ವೀಣಾ ಬನ್ನಂಜೆ ಹೇಳಿದರು.
ಮುದ್ದುರಾಮ ಪ್ರತಿಷ್ಠಾನ ವತಿಯಿಂದ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಸಿದ್ದೇಶ್ವರ ಸ್ವಾಮಿ ಅವರ ನೆನಪಿನಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಶಾಲಾ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗುವುದಕ್ಕೂ ಮುಂಚೆ ನನ್ನ ಆಲೋಚನೆಗಳು ಭಿನ್ನವಾಗಿ ದ್ದವು. ಅವರ ಭೇಟಿ, ಮಾರ್ಗದರ್ಶನ ದೊರೆತ ನಂತರ ನನ್ನ ಆಲೋಚನೆಗಳಲ್ಲಿ ಹಲವು ಬದಲಾವಣೆಗಳು ಆದವು ಎಂದರು.
ಅವರು ತಮ್ಮ ಸರಳ ಮಾತು, ಸರಳ ವ್ಯಕ್ತಿತ್ವದ ಮೂಲಕ ಪ್ರತಿಯೊಬ್ಬರನ್ನು ಆಕರ್ಷಿಸುವ ಶಕ್ತಿ ಹೊಂದಿದ್ದಾರೆ. ಅವರನ್ನು ನಾನು ಎಂದಿಗೂ ವಿಮರ್ಶಿಸಲು ಹೋಗುವುದಿಲ್ಲ, ಅವರು ನನ್ನ ಆತ್ಮವಿಮರ್ಶೆಗೆ ಕಿಟಕಿಯಾದವರು. ಸಿದ್ದೇಶ್ವರ ಸ್ವಾಮೀಜಿ ಅತ್ಯಂತ ಸರಳರು. ಅವರು ಎಂದು ಸಹ ಗಂಭೀರವಾಗಿ ಮಾತನಾಡಿ ಮತ್ತೊಬ್ಬರ ತಲೆಕೆಡಿಸುವವರಲ್ಲ. ಅವರು ಸಣ್ಣ ಕತೆಗಳ ಮೂಲಕವೇ ಬದುಕಿನ ಚಿತ್ರಣವನ್ನು ತೆರೆದಿಡುತ್ತಿದ್ದರು ಎಂದರು.
ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಿ.ಪಿ. ಪ್ರಕಾಶ್ ಮಾತನಾಡಿ, ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆ ಮಾತ್ರ ನಿಮ್ಮ ಬದುಕನ್ನು ಶ್ರೀಮಂತಗೊಳಿಸುತ್ತದೆ ಎಂಬುದು ಸಿದ್ದೇಶ್ವರ ಸ್ವಾಮೀಜಿ ಅವರ ಅಭಿಪ್ರಾಯವಾಗಿತ್ತು. ಅವರ ಚಿಂತನೆ ವಿಶ್ವವ್ಯಾಪಿ ಆಗಿತ್ತು. ಅವರ ಮಾತುಗಳು ದೇಶದ ಗಡಿಗಳನ್ನು ಕಳಚುತ್ತದೆ ಎಂದರು.
ಪ್ರಸ್ತುತ ಎಲ್ಲರು ವಾಟ್ಸ್‌ಆ್ಯಪ್‌ನಲ್ಲಿ ಬರುವ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುತ್ತೇವೆ. ಆದರೆ ಅದು ಸತ್ಯವೋ ಅಸತ್ಯವೋ ಎಂದು ಅರಿಯುವ ಗೋಜಿಗೆ ಹೋಗುವುದಿಲ್ಲ. ಹೇರಲ್ಪಟ್ಟ ಚಿಂತನೆಗಳಿಂದ ನಾವು ಹೊರಗೆ ಬರಬೇಕು. ಆಗ ಮಾತ್ರ ಸತ್ಯ ಯಾವುದು, ಅಸತ್ಯ ಯಾವುದು ಎಂದು ತಿಳಿಯುತ್ತದೆ ಎಂಬುದು ಸ್ವಾಮೀಜಿ ಅವರ ಅಭಿಪ್ರಾಯ ಆಗಿತ್ತು ಎಂದು ಹೇಳಿದರು.
ಈ ಸಂದರ್ಭ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಾದ ಜಿ. ಹೇಮಲತಾ, ಮಹಾಲಕ್ಷ್ಮಿ, ಟಿ.ಎನ್. ಶಿವಮಲ್ಲಯ್ಯ, ಕುಮುದಾ, ಆರ್. ಭಾಗ್ಯಮ್ಮ ಅವರನ್ನು ಸನ್ಮಾನಿಸಲಾಯಿತು.
ನಗರದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮುದ್ದುರಾಮ ಪ್ರತಿಷ್ಠಾನ ಅಧ್ಯಕ್ಷ ಕೆ.ಸಿ. ಶಿವಪ್ಪ ಇದ್ದರು.