ಜಿಲ್ಲೆ

ಸ್ಪರ್ಧೆಯಿಂದ ಮಕ್ಕಳಲ್ಲಿರುವ ಕೌಶಲ ವೃದ್ಧಿ...

ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅಭಿಪ್ರಾಯ

ಮುದ್ದು ಕೃಷ್ಣ-ರಾಧಾ ಛದ್ಮವೇಷ ಸ್ಪರ್ಧೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದು ಯಾವುದೇ ಕ್ಷೇತ್ರ ನೋಡಿದರೂ ಅಲ್ಲಿ ಸ್ಪರ್ಧೆ ಇರುವುದು ಕಂಡುಬರುತ್ತದೆ. ಹೀಗಾಗಿಯೇ ಇದು ಸ್ಪರ್ಧಾತ್ಮಕ ಯುಗವಾಗಿದೆ. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಸ್ಪರ್ಧಾ ಮನೋಭಾವ ರೂಢಿಸಿಬೇಕು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಕೌಶಲ ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅಭಿಪ್ರಾಯಪಟ್ಟರು.

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್​ ಕ್ಲಬ್​ ಮತ್ತು ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಗಸ್ಟ್​ 12ರಂದು ಆಯೋಜಿಸಿದ್ದ ಮುದ್ದು ಕೃಷ್ಣ-ಮುದ್ದು ರಾಧಾ ಛದ್ಮವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಶಾಲೆಯಲ್ಲಿ ನಂದಗೋಕುಲ ಸೃಷ್ಟಿ

ಉಡುಪಿ ರೋಟರಿ ಅಧ್ಯಕ್ಷ ರೊ. ಸೂರಜ್​ಕುಮಾರ್​ ಮಾತನಾಡಿ, ಚಿಕ್ಕ ಮಕ್ಕಳನ್ನು ಕೃಷ್ಣ-ರಾಧೆಯ ರೂಪದಲ್ಲಿ ನೋಡುವುದೇ ಕಣ್ಣಿಗೆ ಅಂದ. ಶಾಲೆಯಲ್ಲಿ ಈ ದಿನ ನಂದಗೋಕುಲದ ವಾತಾವರಣ ಸೃಷ್ಟಿಯಾಗಿದೆ ಎಂದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ವೈಷ್ಣವಿ ಕಾಮತ, ರೋಟರಿ ಜಿಲ್ಲಾ ಚೇರ್ಮನ್​ ಪೊಲಿಯೋ ಪ್ಲಸ್​ ಸುಬ್ರಮಣ್ಯ ಭಾಸ್ರಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಷ್ಮಾ ಪ್ರಭು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ, ಇಂಟರ್ಯಾಕ್ಟ್​ ಕ್ಲಬ್​ನ ಉಪಾಧ್ಯಕ್ಷೆ ಅಪೂರ್ವಾ, ಕಾರ್ಯದರ್ಶಿ ಸಂಜನಾ, ಕ್ಲಬ್​ನ ಶಾಲಾ ಸಂಯೋಜಕಿ ಸುಷ್ಮಾಎಸ್​.ಜಿ., ಶಾಲೆಯ ಶಿಕ್ಷಕರು ಹಾಗೂ ಉಡುಪಿ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ 65 ಪುಟಾಣಿಗಳು ಭಾಗವಹಿಸಿದ್ದರು. ಅಭಿನೇತ್ರಾ, ಶ್ಲಾಘನಾ, ವೈಷ್ಣವಿ, ಕೃತಿ ಪ್ರಾರ್ಥಿಸಿದರು. ಅಪೂರ್ವಾ ಸ್ವಾಗತಿಸಿದರು. ರಿಮಾ ರಾವ್​ ವಂದಿಸಿದರು. ಅನೂಷಾ ಕಾರ್ಯಕ್ರಮ ನಿರೂಪಿಸಿದರು.