ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಪಂ ಪಿಡಿಒ ಉಮೇಶ ರಾಠೋಡ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೋಮವಾರ ತಂಗಡಗಿ ಗ್ರಾಮದ ಸಂಗಯ್ಯ ಸಾರಂಗಮಠ ಸೇರಿದಂತೆ ಕೆಲವರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಹೋರಾಟಗಾರರಾದ ಬಸವರಾಜ ಪೂಜಾರಿ, ಹರೀಶ ಪೂಜಾರಿ, ಹರೀಶ ನಾಟೀಕಾರ ಮಾತನಾಡಿ, ಹಲವು ದಿನಗಳಿಂದ ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಂಬಂಧಪಟ್ಟ ಮೇಲಧಿಕಾರಿಗಳು ಸ್ಪಂದಿಸದೆ ಪಿಡಿಒ ದುರ್ವರ್ತನೆಗೆ ಸಹಕಾರ ನೀಡುತ್ತಿದ್ದಾರೆ.
ಪರಿಶಿಷ್ಟ ಜನಾಂಗದ ಸ್ಮಶಾನ ಜಾಗೆಗೆ ತೆರಳಲು ಸಮರ್ಪಕ ರಸ್ತೆ ನಿರ್ಮಿಸದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಅಧಿಕಾರಿಯಾಗಲಿ, ಬೇರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ್ದರಿಂದ ಹರಿಹಾಯ್ದ ಹೋರಾಟಗಾರರು ತಾಪಂ ಇಒ ಕೊಠಡಿ ಮುಂದೆ ಬೊಬ್ಬೆ ಹೊಡೆದರು. ಅಲ್ಲದೆ, ಸಿಬ್ಬಂದಿಯೊಬ್ಬರು ಹೋರಾಟಗಾರರ ಎದುರು ನಕ್ಕಿದ್ದಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.