ಜಿಲ್ಲೆ

ಮುದ್ದೇಬಿಹಾಳಗೆ ಶೀಘ್ರ ಆಕ್ಸಿಜನ್ ಪ್ಲಾಂಟ್ ಮಂಜೂರು

ಮುದ್ದೇಬಿಹಾಳ: ಕೈ ಬಿಟ್ಟಿರುವ ಆಕ್ಸಿಜನ್ ಪ್ಲಾಂಟ್‌ನ್ನು ಶೀಘ್ರ ತಾಲೂಕಿನಲ್ಲಿ ಪ್ರಾರಂಭಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ವಿಶೇಷ ಕಾಳಜಿಯಿಂದ ಮಂಜೂರಾಗಿದ್ದ ಆಕ್ಸಿಜನ್ ಪ್ಲಾಂಟ್ ಸರ್ಕಾರದ ಹಂತದಲ್ಲಿ ಕೈ ಬಿಟ್ಟಿರುವುದು ಬೆಳಗ್ಗೆ ಗೊತ್ತಾಗಿದ್ದು, ತಕ್ಷಣ ಸಂಬಂಧಿಸಿದ ಡಿಸಿ, ಡಿಎಚ್‌ಒ ಅವರಿಂದ ಮಾಹಿತಿ ಪಡೆದು ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದು, ಅವರು ಎರಡನೇ ಪಟ್ಟಿಯಲ್ಲಿ ಮೊದಲ ಆದ್ಯತೆ ಮೇರೆಗೆ ಆಕ್ಸಿಜನ್ ಪ್ಲಾಟ್ ಮಂಜೂರಾತಿ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರಲ್ಲದೆ, ನಾಲ್ಕೈದು ದಿನಗಳ ಹಿಂದೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ನನ್ನ ಜತೆಗೆ ಈ ಕುರಿತು ಮಾತನಾಡಿದ್ದರು ಎಂದರು.

ರೆಮ್‌ಡೆಸಿವಿರ್ ಲಸಿಕೆ ಕೊರತೆ ಇಲ್ಲ ಎಂದು ಸಚಿವರು ಹೇಳಿದಾಗ ಕಾಳಸಂತೆಯಲ್ಲಿ ಈ ಲಸಿಕೆ ಹೇಗೆ ಮಾರಲಾಗುತ್ತಿದೆ. ಅದಕ್ಕೆ ಕಡಿವಾಣ ಹೇಗೆ ಎಂಬ ಪ್ರಶ್ನೆಗೆ ಸಚಿವರಿಂದ ಸಮರ್ಪಕ ಉತ್ತರ ಬರಲಿಲ್ಲ. ಈಗಾಗಲೇ ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ವಿಪ ಸದಸ್ಯ ಅರುಣ ಶಹಾಪೂರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಡಿಎಚ್‌ಒ ಡಾ. ಮಹೇಂದ್ರ ಕಾಪಸೆ, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ರವೀಂದ್ರ ಬಿರಾದಾರ, ಪುನೀತ ಹಿಪ್ಪರಗಿ ಇತರರಿದ್ದರು.

ವೆಂಟಿಲೇಟರ್ ಖಾಸಗಿ ಆಸ್ಪತ್ರೆಗಳಿಗೆ
ಸರ್ಕಾರಿ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್ ಬೆಡ್‌ಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಜೊಲ್ಲೆ, ನಮ್ಮಲ್ಲಿ ಟೆಕ್ನಿಷಿಯನ್ ಹಾಗೂ ಪಿಜಿಷಿಯನ್ ಕೊರತೆ ಇರುವುದರಿಂದ ಡಿಸಿ ಜತೆಗೆ ಸಭೆ ನಡೆಸಿದಾಗ ಬೇರೆ ಕಡೆ 32 ಖಾಸಗಿ ಆಸ್ಪತ್ರೆಗಳು ಕೋವಿಡ್-19 ಕೈ ಜೋಡಿಸಿವೆ. ಖಾಸಗಿಯವರಿಗೆ ವೆಂಟಿಲೇಟರ್ ಬೆಡ್‌ಗಳನ್ನು ಶಾಸಕರ ಗಮನಕ್ಕೆ ತಂದು ನೀಡಲಾಗಿದೆ ಎಂದರು.

ಅವ್ಯವಹಾರವಾದರೆ ಕಠಿಣ ಕ್ರಮ
ಈಗಾಗಲೇ ಜಿಲ್ಲಾಡಳಿತದಿಂದ ಅಗತ್ಯ ಔಷಧಿ ಸಲಕರಣೆಗಳನ್ನು ಖರೀದಿಸಲಾಗಿರುವ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದು, ಅಧಿಕಾರಿಗಳಿಗೆ ವರದಿ ಕೊಡಲು ತಿಳಿಸಿದ್ದೇನೆ. ಒಂದು ವೇಳೆ ಔಷಧಿ, ಕೋವಿಡ್-19 ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರವಾಗಿದ್ದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇನೆ ಎಂದು ಸಚಿವರು ಹೇಳಿದರು.