ಮುದ್ದೇಬಿಹಾಳ: ವಸತಿ ಶಾಲೆಯೊಂದರ ಕೊಳಚೆ ನೀರಿನಿಂದ ನಿವಾಸಿಗಳಿಗೆ ತೊಂದರೆಯಾಗಿರುವ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತ ವಾರ್ಡ್ ಸದಸ್ಯೆ, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಪುರಸಭೆ ಆಡಳಿತ ಮಂಡಳಿ ಇತರೆ ಕೆಲವು ಸದಸ್ಯರು ಸಮಸ್ಯೆ ಉದ್ಭವಿಸಿರುವ ವಿದ್ಯಾನಗರ ಬಡಾವಣೆ ನಿವಾಸಿಗಳ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿದ್ದಾರೆ.
ವಿದ್ಯಾನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿ ವಸತಿ ಶಾಲೆಯೊಂದರಿಂದ ಕೊಳಚೆ ನೀರು ಹರಿಯಬಿಟ್ಟಿದ್ದರಿಂದಾಗಿ ಸರ್ವಿಸ್ ಚೇಂಬರ್ ತುಂಬಿ ಹರಿದು ಗಬ್ಬು ವಾಸನೆ ಹರಡಿತ್ತು. ಈ ಕುರಿತು ಸಂಬಂಧಿಸಿದವರಿಗೆ ತಿಳಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆ ‘ವಿಜಯವಾಣಿ’ಯಲ್ಲಿ ಏ.5 ರಂದು ನಿವಾಸಿಗಳಿಗೆ ನರಕಯಾತನೆ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ವಾರ್ಡ್ ಸದಸ್ಯೆ ಸಹನಾ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಸದಸ್ಯರು, ಬಡಾವಣೆ ನಿವಾಸಿಗಳಿಗೆ ಆಗುತ್ತಿರುವ ತೊಂದರೆ ವೀಕ್ಷಿಸಿ ಮಹಿಳೆಯರ ಸಮಸ್ಯೆ ಆಲಿಸಿದರು.
ನಿವಾಸಿಗಳಾದ ದೀಪಾ ಸಾಸನೂರ, ಜಯಶ್ರೀ ಬಿರಾದಾರ, ಕಮಲಾಬಾಯಿ ಪಾಟೀಲ ಮಾತನಾಡಿ, ಸೊಳ್ಳೆಗಳ ಕಾಟದಿಂದಾಗಿ ನಿತ್ಯ ಜೀವನ ನಡೆಸುವುದೇ ಕಷ್ಟಕರವಾಗಿತ್ತು. ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗದ್ದ ರಿಂದಾಗಿ ಮಾಧ್ಯಮದವರಿಗೆತಿಳಿಸಿದ್ದೇವು. ನೀವು ಈಗ ಸಮಸ್ಯೆ ಕೇಳಲು ಬಂದಿದ್ದೀರಿ ಎಂದರಲ್ಲದೆ, ನಮ್ಮ ಪ್ರದೇಶದಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ಕಸ ಎತ್ತಿಕೊಳ್ಳಲು ವಾಹನದವರನ್ನು ಕಳುಹಿಸಬೇಕು. ಚರಂಡಿ ಕಾಲಕಾಲಕ್ಕೆ ಶುಚಿಗೊಳಿಸಬೇಕು. ಸಿಸಿ ರಸ್ತೆ ಮಾಡಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗೋಪಾಲ ಕಾಸೆ, ಈ ಲೇಔಟ್ ಅಭಿವೃದ್ಧಿಪಡಿಸದಿರುವ ವ್ಯಾಪ್ತಿಯಲ್ಲಿ ಒಳಗೊಳ್ಳುತ್ತದೆ. ನಿವೇಶನ, ಮನೆ ಖರೀದಿಸುವಾಗ ಸಾರ್ವಜನಿಕರು ಲೇಔಟ್ ಅಭಿವೃದ್ಧಿಯಾಗಿವೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಸದ್ಯಕ್ಕೆ ಈ ಸಮಸ್ನೆಯನ್ನು ಸಂಸ್ಥೆಯುವರು ಸರಿಪಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೀದಿ ದೀಪ, ಕುಡಿವ ನೀರು, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದೆಂದು ಭರವಸೆ ನೀಡಿದರು.
ವಾರ್ಡ್ ಸದಸ್ಯರಷ್ಟೇ ಅಲ್ಲದೆ, ಬೇರೆ ವಾರ್ಡ್‌ಗಳ ಸದಸ್ಯರಾದ ವೀರೇಶ ಹಡಲಗೇರಿ, ಅಶೋಕ ವನಹಳ್ಳಿ, ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಪ್ರೀತಿ ದೇಗಿನಾಳ, ಆರೋಗ್ಯ ವಿಭಾಗದ ಮಹಾಂತೇಶ ಕಟ್ಟಿಮನಿ, ಮುಖಂಡ ವಿಜಯಕುಮಾರ ಬಡಿಗೇರ, ಶಿಕ್ಷಣ ಸಂಸ್ಥೆ ಪ್ರಮುಖರಾದ ಸುರೇಶಗೌಡ ಪಾಟೀಲ, ಮೊರಾರ್ಜಿ ಅಲ್ಪಸಂಖ್ಯಾತರ ವಸತಿ ನಿಲಯದ ಪ್ರಭಾರ ಪ್ರಾಚಾರ್ಯ ಗುಲಾಂನಬಿ, ವಾರ್ಡನ್ ಭಾಗ್ಯಾಶ್ರೀ ಮಾಗಿ ಇದ್ದರು.
ಸಮಸ್ಯೆ ಹೇಳಿದವರ ವಿರುದ್ಧ ಸದಸ್ಯೆ ಗರಂ
ವಾರ್ಡ್ ಸದಸ್ಯೆ ಸಹನಾ ಬಡಿಗೇರ ವಾರ್ಡ್ ನಿವಾಸಿಗಳೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು. ನಾನು ನಿಮ್ಮ ಪರವಾಗಿಯೇ ಪುರಸಭೆಯಲ್ಲಿ ಧ್ವನಿ ಎತ್ತಿರುತ್ತೇನೆ. ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತರದೆ ಮಾಧ್ಯಮಗಳ ಎದುರಿಗೆ ಹೋಗುವುದು ಎಷ್ಟು ಸರಿ? ಎಂದು ನಿವಾಸಿಗಳೊಂದಿಗೆ ತೀವ್ರ ಜಟಾಪಟಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿವಾಸಿಗಳು, ನಮ್ಮ ಸಮಸ್ಯೆ ಹೇಳಿಕೊಳ್ಳಬಾರದೆಂದೂ ಎಲ್ಲೂ ಕಾನೂನು ಇಲ್ಲ. ತೊಂದರೆಯಾಗಿರುವ ಬಗ್ಗೆ ಮಾಧ್ಯಮದವರ ಮುಂದೆ ಹೇಳಿದ್ದೇವೆ. ಅಷ್ಟಕ್ಕೂ ನಾವು ಸದಸ್ಯರಾಗಿರುವ ನಿಮ್ಮನ್ನು ನೋಡುತ್ತಿರುವುದು ಇದೇ ಮೊದಲು ಎಂದು ಪ್ರತ್ಯುತ್ತರ ನೀಡಿದರು. ಬಳಿಕ ಸಮಸ್ಯೆ ಏನೇ ಇದ್ದರೂ ನನ್ನ ದೂರವಾಣಿಗೆ ಕರೆ ಮಾಡುವಂತೆ ಸದಸ್ಯೆ ಬಡಿಗೇರ ತಿಳಿಸಿದರು.
ಸರ್ವಿಸ್ ಚೇಂಬರ್ ಕ್ಲಿನ್, ಹೊಸ ಪೆಪ್ ಅಳವಡಿಕೆ
ಪತ್ರಿಕೆಯ ವರದಿ ಗಮನಿಸಿದ ಬಳಿಕ ಶಾಲೆಯಿಂದ ಹೊರಬಿಟ್ಟಿದ್ದ ಮೂತ್ರಿಗೆ ಹೊಸ ಪೈಪ್ ಅಳವಡಿಸಿರುವ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಸೆಪ್ಟಿಕ್ ಟ್ಯಾಂಕ್‌ನ ಕೊಳಚೆ ಹರಿದು ಹೋಗಲು ಯುಜಿಡಿ ಚೇಂಬರ್‌ಗೆ ಪೈಪ್‌ಲೈನ್ ಕಲ್ಪಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.