ಜಿಲ್ಲೆ

ಮುದ್ದೇಬಿಹಾಳ ಆಸ್ಪತ್ರೆ ಕಥೆ -ವ್ಯಥೆ

ಶಂಕರ ಈ.ಹೆಬ್ಬಾಳ
ಮುದ್ದೇಬಿಹಾಳ :
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ ಎನ್ನುವುದಕ್ಕಿಂತ ಇಲ್ಲ ಎನ್ನುವುದರ ಪಟ್ಟಿಯೇ ಹೆಚ್ಚು ದೊರೆಯುತ್ತಿದೆ.

ಹೆಸರಿಗಷ್ಟೆ ಇದು ನೂರು ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ. ನೂರಾರು ಸಮಸ್ಯೆಗಳನ್ನೆ ಹೊತ್ತುಕೊಂಡು ನಿಂತಿದೆ. ಬಡವರು, ನಿರ್ಗತಿಕರು ಹಾಗೂ ಅಸಹಾಯಕರಿಗೆ ಆಶಾದಾಯಕವಾಗಬೇಕಿದ್ದ ಸಾರ್ವಜನಿಕ ಆಸ್ಪತ್ರೆಯೊಂದು ಆಳುವ ವರ್ಗದ ನಿರ್ಲಕ್ಷೃ, ಆಡಳಿತ ನಡೆಸುವ ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರಿಗೆ ಅನುಕೂಲವಾಗುವ ಬದಲು ಇದ್ದೂ ಇಲ್ಲದಂತಾಗಿದೆ.

ಸಂತಾನಶಕ್ತಿ ಹರಣ ಶಸಚಿಕಿತ್ಸೆ ಅವ್ಯವಸ್ಥೆ
ಸಂತಾನಶಕ್ತಿ ಹರಣ ಶಸ ಚಿಕಿತ್ಸೆಯನ್ನು ಸದ್ಯಕ್ಕೆ ವಿಜಯಪುರ ಮೂಲದ ವೈದ್ಯರು ತಿಂಗಳಲ್ಲಿ ಎರಡು ಬಾರಿ ಮುದ್ದೇಬಿಹಾಳದ ಆಸ್ಪತ್ರೆಯಲ್ಲಿ ಬಂದು ನಡೆಸಿ ಹೋಗುತ್ತಿದ್ದಾರೆ. ಆದರೆ ಈ ಶಸಚಿಕಿತ್ಸೆ ಮಾಡುವಾಗ ಸ್ಥಳೀಯ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳಲು ಬರುವ ಮಹಿಳೆಯರಿಗೆ ಸೂಕ್ತ ಸೌಕರ್ಯಗಳ ಕೊರತೆ ಇದೆ. ಸ್ವತಃ ಆಪರೇಷನ್ ಮಾಡಿಸಿಕೊಂಡು ಬಂದಿರುವ ಮಹಿಳೆಯೊಬ್ಬರು ತಮ್ಮ ಕಹಿ ಅನುಭವವನ್ನು ಪತ್ರಿಕೆ ಎದುರಿಗೆ ಬಿಚ್ಚಿಟ್ಟಿದ್ದಾರೆ.
ಈ ಆಸ್ಪತ್ರೆಯಲ್ಲಿ ಸ್ಥಿತಿವಂತರು, ಪ್ರಭಾವಿಗಳ ಶಿಾರಸು ತೆಗೆದುಕೊಂಡು ಹೋದರೆ ಒಳ್ಳೆಯ ಸೌಲಭ್ಯ ಕೊಡುತ್ತಾರೆ. ವಿಶೇಷ ಕೊಠಡಿಯಲ್ಲಿ ಆಪರೇಷನ್ ಮಾಡಿ ಉಪಚರಿಸುತ್ತಾರೆ. ಆದರೆ ಸಾಮಾನ್ಯರು, ಬಡವರು, ಅನಕ್ಷರಸ್ಥರು ಬಂದರೆ ಅವರನ್ನು ನೆಲದ ಮೇಲೆ ಅದು ವರ್ಷಗಟ್ಟಲೇ ಹಳೆಯದಾದ ಹರಿದ, ಮಾಸಿದ ಜಮಖಾನೆ ಮೇಲೆ ಮಲಗಿಸಿ ಉಪಚರಿಸುತ್ತಾರೆ ಎಂದು ತಿಳಿಸಿದರು.

ಬಾಣಂತಿಯರು, ರೋಗಿಗಳಿಗಿಲ್ಲ ಊಟ
ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು, ಹೆರಿಗೆ ಆದ ಬಳಿಕ ಬಾಣಂತಿಯರಿಗೆ ಕಡ್ಡಾಯವಾಗಿ ಪೌಷ್ಟಿಕ ಆಹಾರ ನೀಡಬೇಕು ಎಂದು ನಿಯಮಗಳಲ್ಲಿದೆ. ನಾಲ್ಕು ತಿಂಗಳಿನಿಂದ ಆಸ್ಪತ್ರೆಯಲ್ಲಿ ಊಟ ನೀಡುವುದು ಬಂದ್ ಆಗಿದೆ. ಕಾರಣ ಕೇಳಿದರೆ ಟೆಂಡರ್ ಆಗಿಲ್ಲ, ಅದಕ್ಕೆ ಊಟ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ.

ಹರಿದ ಬೆಡ್, ಧೂಳು ಹಿಡಿದ ಐಸಿಯು ಘಟಕ :
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ನೋಡಲು ಇಡೀ ತಾಲೂಕಿಗೆ ದೊಡ್ಡ ಆಸ್ಪತ್ರೆಯಾಗಿದ್ದರೂ ಇಲ್ಲಿ ಮಹಿಳೆಯರ ಹೆರಿಗೆಯಾದರೆ ಹರಿದ ಬೆಡ್‌ಗಳ ಮೇಲೆ ಹಾಕಲಾಗುತ್ತಿದೆ. ಹತ್ತಕ್ಕೂ ಹೆಚ್ಚು ಬೆಡ್‌ಗಳು ಹರಿದಿವೆ. ಸಿಬ್ಬಂದಿ ಅವುಗಳನ್ನು ಬದಲಿಸುವ ಗೋಜಿಗೆ ಹೋಗಿಲ್ಲ. ಐಸಿಯು ಘಟಕ ಧೂಳು ಹಿಡಿದಿದೆ.

ವೈದ್ಯ, ಸಿಬ್ಬಂದಿ ಕೊರತೆ
ತಾಲೂಕು ಸಾರ್ವಜನಿಕ ಆಸ್ಪತ್ರೆ ಎಂದು ಹೇಳಲಾಗುತ್ತಿದ್ದರೂ ವೈದ್ಯರು,ಸಿಬ್ಬಂದಿ ಕೊರತೆ ಹೇಳತೀರದಷ್ಟಿದೆ. 11 ವೈದ್ಯ ಹುದ್ದೆಗಳಲ್ಲಿ ಎಲ್ಲ ಹುದ್ದೆಗಳು ಖಾಲಿ ಇದ್ದು, ಕಡ್ಡಾಯ ಸೇವೆ ಆಧಾರದಲ್ಲಿ ಮೂವರು ಸೇವೆ ಸಲ್ಲಿಸುತ್ತಿದ್ದಾರೆ. 22 ಜನ ಸ್ಟ್ಾ ನರ್ಸ್‌ಗಳಿದ್ದು, 36 ಜನ ಗ್ರೂಪ್ ಡಿ ಹುದ್ದೆಗಳ ಪೈಕಿ 6 ಜನ ಕಾಯಂ ಸಿಬ್ಬಂದಿ, 22 ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಲ್ಯಾಬ್ ಟೆಕ್ನಿಷಿಯನ್‌ಗಳಿದ್ದು, ಸೀನಿಯರ್ ಟೆಕ್ನಿಷಿಯನ್ ಡೆಪ್ಯೂಟೇಷನ್ ಮೇಲೆ ಬೇರೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಐಸಿಯು ನೋಡಿಕೊಳ್ಳುವ ಫಿಜಿಷಿಯನ್ ಇಲ್ಲ. ಹಾಗಾಗಿ ಅದು ಬಳಕೆಯಲ್ಲಿಲ್ಲ.

ಆಸ್ಪತ್ರೆ ಶುಚಿತ್ವ ಹಾಗೂ ವೈದ್ಯರ ಕೊರತೆ ಕುರಿತು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಗಮನಕ್ಕೆ ತಂದಿದ್ದೇವೆ. ಅವರು ತಜ್ಞ ವೈದ್ಯರನ್ನು ನೇಮಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಂತಾನಶಕ್ತಿ ಹರಣ ಶಸಚಿಕಿತ್ಸೆ ಬಳಿಕ ಕೆಲವರಿಗೆ ಒಳ್ಳೆಯ ಸೌಕರ್ಯವನ್ನು ಪ್ರತ್ಯೇಕವಾಗಿ ಕೊಟ್ಟಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಮಿತಿ ಸಭೆಯಲ್ಲಿ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸುತ್ತೇವೆ.
ವಿಕ್ರಂ ಓಸ್ವಾಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ

ಸಂತಾನಶಕ್ತಿ ಹರಣ ಶಸಚಿಕಿತ್ಸೆಗೆ 25ರಿಂದ 30 ಮಹಿಳೆಯರಿಗೆ ಅವಕಾಶ ಇರುತ್ತದೆ. ಆದರೆ ಮಾ.15ರಂದು 45 ಜನರಿಗೆ ಶಸಚಿಕಿತ್ಸೆ ಮಾಡಲಾಗಿದೆ. ಬೆಡ್‌ಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಕಾರಣ ಅವರನ್ನು ನೆಲದ ಮೇಲೆ ಮಲಗಿಸಲಾಗಿತ್ತು. ಬಾಣಂತಿಯರಿಗೆ, ರೋಗಿಗಳಿಗೆ ಊಟ ಸ್ಥಗಿತಗೊಂಡಿರುವುದು ನಿಜ. ಅಕ್ಟೋಬರ್ ತಿಂಗಳಲ್ಲಿ ಟೆಂಡರ್ ಮುಗಿದಿದ್ದು, ಸಿದ್ಧಪಡಿಸಿದ ಆಹಾರ ಒದಗಿಸಲು ಮಾ.5 ರಂದು ಟೆಂಡರ್ ಕರೆಯಲಾಗಿದೆ. ಏ.1 ರಿಂದ ಊಟ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಹರಿದ ಬೆಡ್‌ಗಳನ್ನು ಬದಲಾಯಿಸುತ್ತೇವೆ.
ಡಾ. ಅನಿಲಕುಮಾರ ಶೇಗುಣಸಿ,ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

ಸಂತಾನಶಕ್ತಿ ಹರಣ ಶಸಚಿಕಿತ್ಸೆ ವೇಳೆ ಆಗಿರುವ ಲೋಪಗಳ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ತಪ್ಪಾಗಿದ್ದರೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗುವುದು.
ಡಾ.ಸತೀಶ ತಿವಾರಿ, ತಾಲೂಕು ವೈದ್ಯಾಧಿಕಾರಿ

ಸಂತಾನಶಕ್ತಿ ಹರಣ ಶಸಚಿಕಿತ್ಸೆಗಾಗಿ ಅರಿವಳಿಕೆ ಇಂಜೆಕ್ಷನ್ ನೀಡುವ ಹಂತದಲ್ಲಿ ನರ್ಸ್‌ಗಳು ಅತಿ ಕೆಟ್ಟ ಶಬ್ದಗಳಿಂದ ಮಹಿಳೆಯರನ್ನು ನಿಂದಿಸುತ್ತಾರೆ. ಇಲ್ಲಿ ಗೌರವದಿಂದ ಆಪರೇಷನ್ ಮಾಡಿಸಿಕೊಂಡು ನೆಮ್ಮದಿಯಿಂದ ಹೊರಗೆ ಬರುತ್ತೇವೆ ಎನ್ನುವುದು ದೂರದ ಮಾತು.
ಆಪರೇಷನ್ ಮಾಡಿಸಿಕೊಂಡ ಮಹಿಳೆ