ಮುದ್ದೇಬಿಹಾಳ: ಸರ್ಕಾರ, ಯುಕೆಪಿ ಅಧಿಕಾರಿಗಳು ರೈತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ನಾಗಬೇನಾಳ ತಾಂಡಾ ವ್ಯಾಪ್ತಿಯಲ್ಲಿರುವ ತುಳಜಪ್ಪ ಲಮಾಣಿ ರೈತ ಕುಟುಂಬದ ಜಮೀನಿನಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ವಿದ್ಯುತ್ ಸ್ಥಾವರ ಕಾಮಗಾರಿ ನಿರ್ವಹಣೆಗೆ ಮುಂದಾದರೆ ಲಮಾಣಿ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಮಾತನಾಡಿ, 1997ರ ವರೆಗೆ ರೈತನ ಕಬ್ಜಾದಲ್ಲಿದ್ದ ಜಮೀನು 2000ರಲ್ಲಿ ಯುಕೆಪಿ ಹೆಸರಿಗೆ ಆಗಿದೆ ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ವಿವಾದವಿರುವ ಸವೇ ರ್ ನಂ.84ರಲ್ಲಿಯ 24.26 ಎಕರೆ ಜಮೀನಿಗೆ ಸಂಬಂಧಿಸಿದ್ದು ಅದು ತುಳಜಪ್ಪ ಲಮಾಣಿ ಕುಟುಂಬದ ವಾರಸುದಾರರದ್ದು ಎಂದರು.
ರೈತ ಸಂಘದ ಮುಖಂಡರಿಗೆ ಮಂಗಳವಾರ ದೂರವಾಣಿ ಕರೆ ಮಾಡುವ ಮೂಲಕ ಮಾತನಾಡಿದ ಯುಕೆಪಿ ಅಧಿಕಾರಿಗಳು, ಮೇಲಧಿಕಾರಿಗಳ ಒತ್ತಡದ ಹಿನ್ನೆಲೆ ವಿದ್ಯುತ್ ಸ್ಥಾವರದ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಕಾಮಗಾರಿ ಅನುಷ್ಠಾನ ಮಾಡಿದ್ದೇ ಆದಲ್ಲಿ ಸ್ಥಾವರದ ಸ್ಥಳದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದು ಹೇಳಿದರು.
ಶಾಸಕರು ರೈತ ಕುಟುಂಬಕ್ಕೆ ನ್ಯಾಯ ಒದಗಿಸಲು ಮುಂದಾಗಬೇಕು. ಒಂದು ವೇಳೆ ರೈತ ವಿರೋಧಿ ನಿಲುವು ತಾಳಿದರೆ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ವೈ.ಎಲ್. ಬಿರಾದಾರ, ಪವಾಡೆಪ್ಪ ಹವಾಲ್ದಾರ್, ಕುಟುಂಬದ ಸದಸ್ಯರಾದ ಯಮನಪ್ಪ ನಾಯಕ, ಸೋಮಪ್ಪ ನಾಯಕ, ಮಲ್ಲಿಕಾರ್ಜುನ ನಾಯಕ, ನಾಗಪ್ಪ ನಾಯಕ, ತುಳಜಪ್ಪ ನಾಯಕ ಮತ್ತಿತರರಿದ್ದರು.