ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನಲ್ಲಿ ಅವ್ಯವಹಾರ ನಡೆಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸರ್ಕಾರದ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದರೂ ಕ್ರಿಮಿನಲ್ ಮೊಕದ್ದಮೆ ಹೂಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹರೀಶ ನಾಟೀಕಾರ, ದೂರುದಾರ ಮಹಾಂತೇಶ ಕಾಳಗಿ ಆರೋಪಿಸಿದರು.
ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಕಾಳಗಿ ಗ್ರಾಪಂ ಅಧ್ಯಕ್ಷರು, ಪಿಡಿಒ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದುರುಪಯೋಗಪಡಿಸಿಕೊಂಡಿರುವ ಮೊತ್ತವನ್ನು ವಸೂಲಿ ಮಾಡಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ 157(2) ಮತ್ತು 246(8)ರಡಿ ಕ್ರಮ ಜರುಗಿಸುವಂತೆ ವಿಜಯಪುರ ಜಿಪಂ ಸಿಇಒ ಅವರಿಗೆ ಡಿ.13,2019 ರಂದೇ ಸೂಚಿಸಿದ್ದಾರೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಪಂನಿಂದ ಜ.17ರಂದು ಮುದ್ದೇಬಿಹಾಳ ತಾಪಂ ಇಒಗೆ ಪತ್ರ ಬರೆಯಲಾಗಿದ್ದು, ಅದರಂತೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಈವರೆಗೂ ದೂರು ದಾಖಲಿಸಿಲ್ಲ ಎಂದರು.
ತಾಪಂ ಇಒ ಅವರು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಈ ಸಂಬಂಧ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ. ಸೆಕ್ಷನ್ 13,1988ರ ನಿಯಮದನ್ವಯ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಎಸಿಬಿ ಅಧಿಕಾರಿಗಳು ಈ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿ ಸರ್ಕಾರದ ಹಣವನ್ನು ಮರಳಿ ಭರಿಸಿಕೊಳ್ಳಲು ಸಂಬಂಧಿಸಿದ ತನಿಖಾಧಿಕಾರಿಗಳು ತಪ್ಪಿತಸ್ಥ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.
ದೌರ್ಜನ್ಯ ತಡೆ ಸಮಿತಿ ಸದಸ್ಯ ಬಸವರಾಜ ಪೂಜಾರಿ ಮಾತನಾಡಿ, ಅಧಿಕಾರಿಗಳು ಕಾಳಗಿ ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರ ಮಾಡಿರುವ ಅಧ್ಯಕ್ಷರು, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ತನಿಖಾಧಿಕಾರಿಗಳು, ತಾಪಂ ಅಧಿಕಾರಿಗಳ ವಿರುದ್ಧ ೆ.24 ರಂದು ಬೀದಿಗಿಳಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಅಂಬೇಡ್ಕರ್ ಸೇನೆಯ ತಾಲೂಕಾಧ್ಯಕ್ಷ ಪ್ರಕಾಶ ಚಲವಾದಿ, ವೀರೇಶ ಭಜಂತ್ರಿ, ವಿಠ್ಠಲ ಖಾನಗೌಡರ ಇದ್ದರು.