ಜಿಲ್ಲೆ

ಶಾಲೆ ನಡೆಸಲು ಪಾಲಕರ ಒತ್ತಾಯ

Vijayapura

ಮುದ್ದೇಬಿಹಾಳ: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಯನ್ನು ಪೂರ್ಣವಾಗಿ ತೆರೆಯುವಂತೆ ಸರ್ಕಾರ ನಿರ್ದೇಶನ ನೀಡುವವರೆಗೂ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಆಯಾ ನಗರ ಪ್ರದೇಶದ ಜನವಸತಿ ಪ್ರದೇಶದಲ್ಲಿರುವ ಪಾಲಕರ ಮನೆಗಳಲ್ಲೇ ಒಂದೆಡೆ ವಿದ್ಯಾರ್ಥಿಗಳನ್ನು ಕೂಡಿಸಿ ಪಾಠ, ಪ್ರವಚನ ಕಾರ್ಯ ನಡೆಸಬೇಕು ಎಂಬ ಅಭಿಪ್ರಾಯವನ್ನು ಪಾಲಕರು ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮಾರುತಿ ನಗರದಲ್ಲಿ ಆಕ್ಸ್‌ರ್ಡ್ ಪಾಟೀಲ್ಸ್ (ನಾಗರಬೆಟ್ಟ) ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಹಾಗೂ ಪಾಲಕರ ಸಭೆಯಲ್ಲಿ ಈ ಅಭಿಪ್ರಾಯವನ್ನು ಬಹುತೇಕ ಪಾಲಕರು ವ್ಯಕ್ತಪಡಿಸಿದ್ದಾರೆ.
ಪಾಲಕರಾದ ಎಸ್.ಎಂ. ಮಂಗ್ಯಾಳ, ಬಿ.ಎಚ್.ನಾಗರಬೆಟ್ಟ ಮಾತನಾಡಿ, ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ಧರಿದ್ದೇವೆ. ದಿನಗಳು ಉರುಳಿದಂತೆ ಪಾಠಗಳ ಮೇಲಿನ ಗಮನ ಕಡಿಮೆ ಆಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತಗೊಳ್ಳುವ ಆತಂಕ ಎದುರಾಗುತ್ತಿದೆ. ಆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ನಡೆಸಬೇಕು. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಜವಾಬ್ದಾರಿ ನಮ್ಮದು. ಕರೊನಾ ವೈರಸ್ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಾವೇ ಅದರಿಂದ ದೂರವಿರಬೇಕು. ಅದಕ್ಕೆ ಅಗತ್ಯ ಮುಂಜಾಗ್ರತೆ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರದ ಪಾಲನೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ರವಿ ಬಿರಾದಾರ ಮಾತನಾಡಿ, ಆಯಾ ವಾರ್ಡ್‌ಗಳಲ್ಲಿ ಪಾಲಕರೊಬ್ಬರ ಮನೆಯಲ್ಲಿ ವಿಶಾಲ ಪ್ರದೇಶದಲ್ಲಿ ಮಕ್ಕಳಿಗೆ ಪಾಠ, ಪ್ರವಚನ ಹೇಳಿಕೊಡುವ ಕೆಲಸ ಮಾಡಲಾಗುತ್ತದೆ. ವಿದ್ಯಾರ್ಥಿಗಳನ್ನು ಕಳಿಸುವುದಾದರೆ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಹೇಳಿದರು.
ಎಂಜಿವಿಸಿ ಕಾಲೇಜಿನ ಉಪನ್ಯಾಸಕ ಪ್ರಕಾಶ ನರಗುಂದ ಮಾತನಾಡಿ, ಕೋವಿಡ್-19 ಇದೆ ಎಂದು ಮಕ್ಕಳ ಶಿಕ್ಷಣವನ್ನು ಬಲಿಪಡೆಯಲು ಆಗುವುದಿಲ್ಲ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಮಕ್ಕಳಿಗೆ ಪಾಠಗಳನ್ನು ಅಧ್ಯಯನ ಮಾಡುವ ಅವಕಾಶ ದೊರಕಿಸಿಕೊಡಬೇಕು. ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಮ್ಮ ಭಾಗದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಅಲ್ಲಿಯೇ ವಿದ್ಯಾಭ್ಯಾಸಕ್ಕೆ ಕಳಿಸಬೇಕು. ದಕ್ಷಿಣ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಪರ್ಸೆಂಟೇಜ್ ಮಾಡಿಸಿಕೊಡುತ್ತಾರೆ ಎಂಬುದೆಲ್ಲ ಸುಳ್ಳು ಎಂದು ಹೇಳಿದರು.
ಶೇ.90ಕ್ಕೂ ಹೆಚ್ಚು ಅಂಕ ಪಡೆದ ಪೂರ್ವಿ ಚಿನಿವಾರ, ವಿದ್ಯಾ ಅಂಬಿಗೇರ, ಸೇಜಲ್ ತಡಸದ ಅವರನ್ನು ಸನ್ಮಾನಿಸಲಾಯಿತು. ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಈರಣ್ಣ ತಡಸದ, ಶಿಕ್ಷಕ ಎಸ್.ಜಿ. ಕೂಡಗಿ ಇದ್ದರು. ನಾಗರಾಜ ಗೋನಾಳ ನಿರೂಪಿಸಿದರು.