ಜಿಲ್ಲೆ

ಅಭಿವೃದ್ಧಿಗೊಂಡ ಬಡಾವಣೆಗಳ ಹಸ್ತಾಂತರಕ್ಕೆ ಮುಡಾ ನಿರ್ಧಾರ

ಸದೇಶ್ ಕಾರ್ಮಾಡ್

ಮೈಸೂರು: ಸಂಪೂರ್ಣ ಅಭಿವೃದ್ಧಿಗೊಂಡಿರುವ ಮುಡಾ ಹಾಗೂ ಮುಡಾ ಅನುಮೋದಿತ ಖಾಸಗಿ ಬಡಾವಣೆಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಮಂಗಳವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಮುಡಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಬಡಾವಣೆಗಳ ಹಸ್ತಾಂತರ ಕುರಿತು ಚರ್ಚೆ ನಡೆಯಿತು. ಮುಡಾ ವ್ಯಾಪ್ತಿಯಲ್ಲಿ ಸಾಕಷ್ಟು ಖಾಸಗಿ ಬಡಾವಣೆಗಳು ಅಭಿವೃದ್ಧಿಗೊಂಡಿದ್ದು, ಅವುಗಳು ಇನ್ನೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಅಭಿವೃದ್ಧಿಗೊಂ ಡಿರುವ ಬಡಾವಣೆಗಳನ್ನು ಹಸ್ತಾಂತರ ಮಾಡಬೇಕು ಎಂದು ಸದಸ್ಯರು ಸಲಹೆ ನೀಡಿದರು.

ರಸ್ತೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೌಲಭ್ಯ ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಹೊಂದಿರುವ ಬಡಾವಣೆ ಗಳನ್ನು ಹಸ್ತಾಂತರ ಮಾಡಬೇಕು. ಯಾವೆಲ್ಲ ಬಡಾವಣೆಗಳು ಅಭಿವೃದ್ಧಿ ಹೊಂದಿವೆ ಎಂಬ ಪಟ್ಟಿ ಸಿದ್ಧಪಡಿಸಿಕೊಂಡು ಅವುಗಳ ಹಸ್ತಾಂತರಕ್ಕೆ ಕ್ರಮ ವಹಿಸಲು ತೀರ್ಮಾನಿಸಲಾಯಿತು.

ಬಡಾವಣೆ ನಿರ್ಮಾಣಕ್ಕೆ ರೈತರಿಂದ ಜಮೀನು ಭೂ ಸ್ವಾಧೀನ ಪಡಿಸಿಕೊಂಡಿರುವ ಪ್ರಕರಣಗಳಲ್ಲಿ ರೈತರಿಗೆ ಬದಲಿ ನಿವೇಶನ ನೀಡುವ ಅಧಿಕಾರವನ್ನು ಮುಡಾ ಆಯುಕ್ತರಿಂದ ಹಿಂಪಡೆದು ಮುಡಾ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಯಿತು.