ಜಿಲ್ಲೆ

ನಿವೇಶನ ರಹಿತರಿಗೆ ಭೂಮಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಡೀಮ್ಡ್ ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿರುವ ಜಮೀನನ್ನು ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ನಿವೇಶನ ರಹಿತರಿಗೆ ಭೂಮಿ ನೀಡಲು ಕ್ರಮವಹಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಮುದರಂಗಡಿ ಗ್ರಾಪಂ ವ್ಯಾಪ್ತಿಯ ವಿದ್ಯಾನಗರ ಶ್ರೀ ದುರ್ಗಾ ಮಂದಿರದಲ್ಲಿ ಬುಧವಾರ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಗ್ರಾಮದಲ್ಲಿ ಈಗಾಗಲೇ ನಿವೇಶನ ರಹಿತರಿಗಾಗಿ ನೀಡಲು 14 ಎಕರೆ ಜಮೀನು ಗುರುತಿಸಲಾಗಿದೆ. 2000 ನಿವೇಶನ ರಹಿತರ ಅರ್ಜಿಗಳಿದ್ದು, ಹೆಚ್ಚಿನ ಭೂಮಿ ಅಗತ್ಯವಿದೆ. ಡೀಮ್ಡ್ ಅರಣ್ಯ ವ್ಯಾಪ್ತಿಗೆಯಲ್ಲಿರುವ ಜಮೀನಿಂದ ನಿವೇಶನ ನೀಡಲು ತೊಡಕಾಗುತ್ತಿದೆ ಎಂದು ಕಂದಾಯ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಶಾಸಕರ ಗಮನಕ್ಕೆ ತಂದರು.

ತಹಸೀಲ್ದಾರ್ ಪ್ರತಿಭಾ ಆರ್.ಮಾತನಾಡಿ, ಜನರು ಕಚೇರಿಗಳಿಗೆ ಎಡತಾಕುವುದನ್ನು ತಪ್ಪಿಸಿ, ಅಧಿಕಾರಿಗಳೇ ಗ್ರಾಮಕ್ಕೆ ಆಗಮಿಸಿ ಅಹವಾಲು ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸುವ ಜನಸಂಪರ್ಕ ಸಭೆ ಲಾಭವನ್ನು ಗ್ರಾಮಸ್ಥರು ಪಡೆಯಬೇಕು ಎಂದರು. ಗ್ರಾಂಪನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಶೇ.25ರ ನಿಧಿಯಿಂದ ಹಾಗೂ ವಿವಿಧ ಇಲಾಖೆಗಳ ಸವಲತ್ತು ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ನಮಿತಾ, ಉಪಾಧ್ಯಕ್ಷೆ ಮೋಹಿನಿ ಸಿ.ಹೆಗ್ಡೆ, ಪಿಡಿಒ ಮುತ್ತು, ವಿವಿಧ ಇಲಾಖಾ ಅಧಿಕಾರಿಗಳಾದ ಸುಧಾಕರ್ ಶೆಟ್ಟಿ, ಡಾ. ಸುಬ್ರಹ್ಮಣ್ಯ ಪ್ರಭು, ಪುಷ್ಪಲತಾ, ಎಂ.ಹುಸೇನ್, ಪ್ರಸಾದ್, ರಾಹುಲ್, ಮನೋಜ್, ಫಿಲೋಮಿನಾ, ಜೀವನ್‌ದಾಸ್ ಶೆಟ್ಟಿ, ಶ್ರುತಿ, ಜಗದೀಶ್ ಉಪಸ್ಥಿತರಿದ್ದರು. ಲೆಕ್ಕಾಧಿಕಾರಿ ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.

ಅಪಾಯಕಾರಿ ಮರ ತೆರವು ಮಾಡಿ

ಗ್ರಾಮದಲ್ಲಿ ಕಾಡುಕೋಣ ಹಾಗೂ ಇತರ ಕಾಡು ಪ್ರಾಣಿ ಹಾವಳಿಯಿಂದ ಕೃಷಿಕರಿಗಾಗುತ್ತಿರುವ ಸಮಸ್ಯೆ ಕುರಿತಂತೆ ಅರಣ್ಯ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮಕ್ಕೆ ಪ್ರಯತ್ನಿಸಲಾಗುವುದು. ಮಳೆಗಾಲ ಮುಂಚಿತವಾಗಿ ಅಪಾಯಕಾರಿ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿಯವರಿಗೆ ಶಾಸಕರು ತಾಕೀತು ಮಾಡಿದರು.

ಹೂವಿನ ಬೆಳೆ ಬೆಳೆಸಲು ಉತ್ತೇಜನ

ತೋಟಗಾರಿಕಾ ಇಲಾಖೆಯಿಂದ ಮಣ್ಣುಪರೀಕ್ಷೆ ನಡೆಸಿ ಈ ಪ್ರದೇಶಕ್ಕೆ ಹೊಂದುವಂತಹ ಹೂವಿನ ಬೆಳೆ ಬೆಳೆಸಲು ಉತ್ತೇಜಿಸಬೇಕು. ಕೃಷಿ ಇಲಾಖೆಯಿಂದ ಅಗತ್ಯವಿರುವ ಭತ್ತದ ಬೀಜ ಹಾಗೂ ದಾಸ್ತಾನಿರಿಸಲು ಕ್ರಮವಹಿಸಬೇಕು. ಮೆಸ್ಕಾಂ ಇಲಾಖೆಯಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಹಾಗೂ ಹಳೇ ತಂತಿ ಬದಲಾವಣೆಗೆ ಕಾರ್ಯೋನಮುಖವಾಗಬೇಕು. ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೊರತೆಯಿರುವ ಸಿಬ್ಬಂದಿ ನಿಯೋಜನೆಗೆ ಡಿಎಚ್‌ಒ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

ನೀರಿನ ಸಮಸ್ಯೆಗೆ ತುರ್ತು ಸ್ಪಂದನೆ

ಗ್ರಾಮದಲ್ಲಿ ಯಾವೊಂದು ಮನೆಗೆ ನೀರಿನ ಸಮಸ್ಯೆ ಉಂಟಾಗದಂತೆ ತುರ್ತು ಸ್ಪಂದಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಟ್ಯಾಂಕರ್ ನೀರಿನ ಮೊರೆ ಹೋಗಬೇಕು. ಮಳೆಗಾಲದಲ್ಲಿ ನೆರೆಯಿಂದ ಅವಘಡಗಳಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಕೋಪ ನಿರ್ವಹಣಾ ಸಮಿತಿ ಸಭೆ ನಡೆಸಬೇಕು. ಕೆರೆ ಹಾಗೂ ತೋಡುಗಳ ಹೂಳೆತ್ತಲು ನರೇಗಾ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಗ್ರಾಪಂ ಪಿಡಿಒ ಹಾಗೂ ಸದಸ್ಯರಿಗೆ ಸಲಹೆ ನೀಡಿದರು.

ಪೊಲೀಸ್ ಇಲಾಖೆ ಗೈರು

ಜನಸಂಪರ್ಕ ಸಭೆ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ, ಪೊಲೀಸ್ ಇಲಾಖೆ ಗೈರು ಹಾಜರಾಗಿರುವ ಬಗ್ಗೆ ಗುರ್ಮೆ ಗರಂ ಆದರು. ಸಭೆ ಮುಕ್ತಾಯದ ವೇಳೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಕಾರಣ ಹೇಳಲು ಮುಂದಾದಾಗ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಐಜಿಗೆ ದೂರು ನೀಡುವುದಾಗಿ ತಿಳಿಸಿದರು.