ಪಾಂಡವಪುರ: ನೀರಾವರಿ ವಂಚಿತ ಪ್ರದೇಶವಾಗಿದ್ದ ಮೂಡನಹಳ್ಳಿ ಗ್ರಾಮದ ಸುತ್ತಮುತ್ತ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ಕಾರಣ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಮೈಸೂರಿನ ರಾಜವಂಶಸ್ಥ ಚಾಮರಾಜ ಒಡೆಯರ್ ಅವರು ರಾಗಿಯ ವಿಶೇಷತೆ ತಿಳಿದು ಈ ಗ್ರಾಮಕ್ಕೆ ರಾಗಿಮುದ್ದನಹಳ್ಳಿ ಎಂದು ನಾಮಕರಣ ಮಾಡಿದರು ಎಂಬುದು ಈಗ ಇತಿಹಾಸ.
ತಾಲೂಕಿನ ಚಿನಕುರಳಿ ಹೋಬಳಿ ವ್ಯಾಪ್ತಿಗೆ ಬರುವ ರಾಗಿಮುದ್ದನಹಳ್ಳಿ ಬಹುದೊಡ್ಡ ಗ್ರಾಮ. 1788ಕ್ಕೂ ಮುಂಚೆ ಈ ಗ್ರಾಮವನ್ನು ಮೂಡನಹಳ್ಳಿ ಎಂದು ಕರೆಯಲಾಗುತ್ತಿತ್ತು. ಒಮ್ಮೆ ಮೈಸೂರಿನ ಅರಸರಾದ ಚಾಮರಾಜ ಒಡೆಯರ್ ಅವರು ಬೇಬಿ ಬೆಟ್ಟದಲ್ಲಿರುವ ಮಹದೇಶ್ವರ ಮತ್ತು ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಗ್ರಾಮದ ಮಾರ್ಗವಾಗಿ ವಿಜಯನಗರ ಸಂಸ್ಥಾನಕ್ಕೆ ತೆರಳುವಾಗ ಈ ಭಾಗದಲ್ಲಿ ಅಪಾರವಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ಕಂಡು ಇದ್ಯಾವ ಬೆಳೆ, ಇಷ್ಟು ಪ್ರಮಾಣದಲ್ಲಿ ಯಾಕೆ ಬೆಳೆಯಲಾಗಿದೆ ಮತ್ತು ಇದರಿಂದ ತಯಾರಿಸುವ ಖಾದ್ಯ ಯಾವುದು ಎಂದು ದಿವಾನ್ ಪೂರ್ಣಯ್ಯ ಅವರನ್ನು ವಿಚಾರಿಸಿದರಂತೆ. ಇದಕ್ಕೆ ರಾಗಿ ಎಂದು ಕರೆಯುತ್ತಾರೆ. ಮಳೆಯಾಶ್ರಿತವಾಗಿ ಬೆಳೆಯಬಹುದಾದ ಆಹಾರ ಬೆಳೆಯಾಗಿದೆ. ಇದರಿಂದ ರಾಗಿಮುದ್ದೆ ಮಾಡಿ ಸೇವಿಸುತ್ತಾರೆ. ಪೌಷ್ಟಿಕವಾಗಿ ಉತ್ತಮ ಆಹಾರ ವಾಗಿದೆ ಎಂದು ತಿಳಿಸಿದ ಕಾರಣ ಅಂದಿನಿಂದ ಮೂಡನಹಳ್ಳಿ ಗ್ರಾಮಕ್ಕೆ ರಾಗಿಮುದ್ದನಹಳ್ಳಿ ಎಂದು ಒಡೆಯರ್ ನಾಮಕರಣ ಮಾಡಿದರು ಎಂಬುದು ಗ್ರಾಮದ ಹಿರಿಯರ ಅನಿಸಿಕೆ.
ಭೌಗೋಳಿಕವಾಗಿ ವಿಶಾಲವಾಗಿರುವ ಮತ್ತು ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಇದಾಗಿದ್ದು, ಶೇ.70ರಷ್ಟು ವಿದ್ಯಾವಂತರು ಇಲ್ಲಿದ್ದಾರೆ. ಇಲ್ಲಿನ ಜನರ ಮೂಲ ಕಸಬು ವ್ಯವಸಾಯ ಮತ್ತು ಹೈನುಗಾರಿಕೆ. ಗ್ರಾಮದ ಬಹುತೇಕರು ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ರಿಟಿಷರ ಆಳ್ವಕೆ ಕಾಲದಲ್ಲೇ ಗ್ರಾಮದಲ್ಲಿ ಶಾಲೆ ಇತ್ತು ಎಂಬುದಕ್ಕೆ ದಾಖಲೆ ಕೂಡ ಇದೆ. ಗ್ರಾಮದ ಬಹುತೇಕರು ಕ್ರೀಡೆಯಲ್ಲೂ ಹೆಸರು ಮಾಡಿದ್ದು, ವಾಲಿಬಾಲ್, ಖೋಖೋ ಮತ್ತಿತರ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.
ಹೇಮಾವತಿ ನಾಲೆ ಹರಿಯುವ ಮುನ್ನ ಮಳೆಯಾಶ್ರಿತ ಬೆಳೆ: 1990ಕ್ಕೂ ಮೊದಲು ರಾಗಿ, ಹುರುಳಿ, ಅವರೆ, ಎಳ್ಳು, ನವಣೆ, ಸಜ್ಜೆ ಇತ್ಯಾದಿಯನ್ನು ಮಳೆಯಾಶ್ರಿತ ಬೆಳೆಯಾಗಿ ಬೆಳೆಯಲಾಗುತ್ತಿತ್ತು. 1990ರಲ್ಲಿ ಹೇಮಾವತಿ ಕಾಲುವೆ ಗ್ರಾಮದ ಮಾರ್ಗವಾಗಿ ಹರಿದ ಪರಿಣಾಮ ಭತ್ತ, ಕಬ್ಬು, ತರಕಾರಿ ಅಡಕೆ, ತೆಂಗು, ಬಾಳೆ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಗ್ರಾಮದ ಮುಖ್ಯ ಕಸುಬು ವ್ಯವಸಾಯವಾದರೂ ಗ್ರಾಮದ ಸುತ್ತಮುತ್ತ ಬೇಬಿ ಬೆಟ್ಟದ ಸಾಲು ಹೊಂದಿಕೊಂಡಿದ್ದರಿಂದ 1980ರ ನಂತರ ಕ್ವಾರಿ, ಕಲ್ಲು ಪುಡಿ ಘಟಕ, ಲಾರಿ, ಟಿಪ್ಪರ್ ಇತ್ಯಾದಿ ಕೆಲಸದ ಮೇಲೂ ಇಲ್ಲಿನ ಜನ ಅವಲಂಬಿತರಾದರು. ಅಂದಿನಿಂದ 2018ರವರೆಗೆ ಬಹುತೇಕರು ಕ್ವಾರಿ ಸಂಬಂಧಿತ ಕೆಲಸ ಕಾರ್ಯಗಳಿಂದ ಜೀವನ ನಿರ್ವಹಣೆ ಮಾಡಿರುವುದೂ ಉಂಟು. 2018ರ ಬಳಿಕ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿದೆ ಎಂದು ಕೇಂದ್ರ ವಿಕೋಪ ಮಂಡಳಿ ಸರ್ಕಾರಕ್ಕೆ ವರದಿ ನೀಡಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ಥಗಿತವಾಯಿತು. ಹೀಗಾಗಿ ಬಹುತೇಕರು ಮರಳಿ ವ್ಯವಸಾಯದತ್ತ ಮುಖ ಮಾಡಿದರು.
ಒಡೆಯರ ಕಾಲದಿಂದಲೂ ಮಹದೇಶ್ವರನಿಗೆ ಎಣ್ಣೆ ಮಜ್ಜನ: ಮೈಸೂರು ಸಂಸ್ಥಾನಕ್ಕೂ ಈ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ತಾಲೂಕಿನ ಬೇಬಿ ಬೆಟ್ಟದಲ್ಲಿರುವ ಮಹದೇಶ್ವರಸ್ವಾಮಿಗೆ ಗ್ರಾಮಸ್ಥರು ಒಗ್ಗೂಡಿ ವರ್ಷದಲ್ಲಿ ಎರಡು ಬಾರಿ ಎಣ್ಣ ಮಜ್ಜನ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸ್ವಾಮಿಯ ಹುಲಿವಾಹನ ಹಾಗೂ ಬೆಳ್ಳಿ ಕೊಳಗವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಬೆಳ್ಳಿ ಕೊಳಗವನ್ನು ಮೈಸೂರಿನ ಅರಮನೆ ತಂದು ಪೂಜಾ ಕಾರ್ಯಗಳು ಮುಗಿದ ಬಳಿಕ ಅರಮನೆ ಹಿಂದಿರುಗಿಸಲಾಗುತ್ತದೆ.
ರಾಗಿಮುದ್ದನಹಳ್ಳಿ ಗ್ರಾಮಸ್ಥರು ಭಾವೈಕ್ಯತೆಯಿಂದ ಬದುಕುತ್ತಿದ್ದು, ಹಲವು ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ಆರ್ಥಿಕ ಮೂಲ ಕಂಡುಕೊಂಡಿದ್ದಾರೆ. ಬಹಳ ಹಿಂದಿನಿಂದಲೂ ಗ್ರಾಮ ನ್ಯಾಯ, ನೀತಿ, ಧರ್ಮಕ್ಕೆ ಹೆಸರುವಾಸಿ. ಹಿಂದೆ ಗ್ರಾಮದ ಯಜಮಾನರು 37 ಹಳ್ಳಿಗಳಿಗೆ ಪಂಚಾಯಿತಿ ಮಾಡುತ್ತಿದ್ದರು. ಅತಿ ಹೆಚ್ಚು ಶಿಕ್ಷಿತರಿರುವ ಗ್ರಾಮದಲ್ಲಿ ಬಹಳಷ್ಟು ಜನ ಪೊಲೀಸ್ ಇಲಾಖೆ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಅನೇಕರು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜತೆಗೆ ಈ ಗ್ರಾಮವನ್ನು ದೇವಸ್ಥಾನಗಳ ಊರು ಎಂತಲೂ ಕರೆಯಲಾಗುತ್ತದೆ. ಗ್ರಾಮದಲ್ಲಿ ಮಾರಮ್ಮ, ವಳಕಲ್ಲು ದೇವಮ್ಮ, ದೇವಿರಮ್ಮ, ಮಷಣಿಕಮ್ಮ, ಹಾಲಮ್ಮ, ಹುಚ್ಚಮ್ಮ ಇನಿತರೆ ದೇವಸ್ಥಾನಗಳು ಇದೆ.
ರಾ.ಸ.ಹನುಮಂತೇಗೌಡ ಗ್ರಾಮಸ್ಥ
ಮೈಸೂರು ಅರಸರ ಕಾಲದಲ್ಲಿ ಇದ್ದ ಗ್ರಾಮ ಇದು. ಶಿಕ್ಷಣದ ಜತೆಗೆ ಕ್ರೀಡೆಗೂ ಅಷ್ಟೇ ಮಹತ್ವ ನೀಡಿದೆ. ಗ್ರಾಮದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಅಲ್ಲದೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ನಮ್ಮ ಕುಟುಂಬದ ಸದಸ್ಯರ ಕೊಡುಗೆಯೂ ಇದೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಮೂರು ಬಾರಿ ಪದಕ ತಂದಿದ್ದೇನೆ. 2015ರ ರಾಷ್ಟ್ರೀಯ ಫೆಡರೇಷನ್ ಕಪ್‌ನಲ್ಲಿ ರಾಜ್ಯಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದೇನೆ.
ಎಂ.ಎಚ್.ಕುಮಾರ್, ನಿವೃತ್ತ ಅಂತಾರಾಷ್ಟ್ರೀಯ ವಾಲಿಬಾಲ್ ತರಬೇತುದಾರ