ಜಿಲ್ಲೆ

ಮುಡಾ ಹಗರಣ: ಕರ್ನಾಟಕ ಸೇನಾಪಡೆ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.


ಬಡಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳು ಸಿಗಲಿ ಎಂಬ ಆಶಯದಿಂದ ಈ ಸಂಸ್ಥೆಯನ್ನು ಮಹಾರಾಜರು ಸ್ಥಾಪನೆ ಮಾಡಿದ್ದರು. ಆದರೀಗ ಮುಡಾ ರಿಯಲ್ ಎಸ್ಟೇಟ್ ಮಾಫಿಯಾದ ಹಿಡಿತದಲ್ಲಿದೆ. ಶೇ.90 ಮುಡಾ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕಬಳಿಸಿದ್ದಾರೆ. ಸಾರ್ವಜನಿಕರು ಹಲವಾರು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ನಿವೇಶನ ಸಿಕ್ಕಿಲ್ಲ. ಬದಲಿಗೆ ನಿವೇಶನಗಳು ಬಲಾಢ್ಯರ ಪಾಲಾಗುತ್ತಿವೆ ಎಂದು ಕಿಡಿಕಾರಿದರು.


ಈ ಹಿಂದೆ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ಕುಮಾರ್ ಅವರನ್ನು 2-3 ಬಾರಿ ವರ್ಗಾವಣೆ ಮಾಡಿದರೂ ಮತ್ತೆ ಅವರನ್ನು ಮುಡಾದಲ್ಲಿ ಲೂಟಿ ಮಾಡಲು ಉಳಿಸಿಕೊಳ್ಳಲಾಯಿತು. ಮೈಸೂರು ಜಿಲ್ಲಾಧಿಕಾರಿ ಹಗರಣ ಕುರಿತು ಸರ್ಕಾರಕ್ಕೆ 10-15 ಬಾರಿ ಪತ್ರ ಬರೆದರೂ ಸ್ಪಂದಿಸಲಿಲ್ಲ. ಇದರ ಪರಿಣಾಮ ದೊಡ್ಡ ಹಗರಣ ನಡೆದಿದೆ ಎಂದು ದೂರಿದರು.


ಸಾವಿರಾರು ಕೋಟಿ ರೂ. ಹಗರಣ ನಡೆದಿದ್ದರೂ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಅವರನ್ನು ಬಂಧಿಸಿ ವಿಚಾರಣೆ ಸಹ ಮಾಡಿಲ್ಲ. ಏನೂ ಆಗಿಲ್ಲವೆಂಬಂತೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಇದು ಸರ್ಕಾರದ ವೈಫಲ್ಯ ಹಾಗೂ ಸರ್ಕಾರವೇ ಭಾಗಿಯಾಗಿರುವುದನ್ನು ತೋರಿಸುತ್ತದೆ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.


ಸಂಘಟನೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಖಂಡರಾದ ಪ್ರಭುಶಂಕರ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ಶಾಂತರಾಜೇ ಅರಸ್, ನೇಹಾ, ಮಂಜುಳಾ, ವರಕೂಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ನಾಗಣ್ಣ, ಕುಮಾರ್ ಗೌಡ, ಭಾಗ್ಯಮ್ಮ, ನಾರಾಯಣಗೌಡ ಇತರರಿದ್ದರು.