ಜಿಲ್ಲೆ

ಮುಡಾ ಹಗರಣದಲ್ಲಿ ಸಿಎಂಗೆ ನೋಟಿಸ್;​ ರಾಜ್ಯಪಾಲರ ವಿರುದ್ಧವೇ ನಿರ್ಣಯ ಕೈಗೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ( ಮುಡಾ) ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿವಾದ ಈಗಾಗಲೇ ಹಲವು ದಿನಗಳಿಂದ ಸುದ್ದಿ ಆಗುತ್ತಿದೆ. ಈ ಪ್ರಕರಣವನ್ನು ಮನಗಂಡ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಪ್ರತಿಕ್ರಿಯೆ” ಕೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಅವರು ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುವಂತೆ ನೋಟೀಸ್ ನೀಡಿದ್ದಾರೆ.

ಬಿಜೆಪಿ ಮನವಿ ಪತ್ರವನ್ನು ಸಲ್ಲಿಸಿರುವುದರಿಂದ, ರಾಜ್ಯಪಾಲರು ಮುಖ್ಯಮಂತ್ರಿಯಿಂದ ಉತ್ತರವನ್ನು ಕೇಳುವುದು ಅನಿವಾರ್ಯವಾಗಿದೆ. ಅದರಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಈ ಕುರಿತು ಈಗಾಗಲೇ ಹಲವಾರು ಸಚಿವರು, ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸಂಪುಟ ಸಭೆ ಕರೆದಿರುವ ಸಿಎಂ ಸಿದ್ದರಾಮಯ್ಯ ಅವರು, ಸಭೆಯಲ್ಲಿ ರಾಜ್ಯಪಾಲರ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ, ರಾಜ್ಯಪಾಲರು ಮುಡಾ ಹಗರಣದ ಬಗ್ಗೆ ಮತ್ತೆ ವರದಿ ಕೇಳಿರುವುದು ಮತ್ತು ಅವರ ಮುಂದಿನ ನಡೆ, ಕಾನೂನು ಹೋರಾಟ, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚೆ ನಡೆದಿದ್ದು, ಬಿಜೆಪಿಯವರ ಪಾದಯಾತ್ರೆಯನ್ನು ಹೇಗೆ ಮಟ್ಟಹಾಕಬೇಕು ಮತ್ತು ಅವರ ಹಗರಣಗಳ ಬಗ್ಗೆಯೂ ಪಟ್ಟಿ ಮಾಡಬೇಕು ಎನ್ನುವದರ ಬಗ್ಗೆ ಕಾಂಗ್ರೆಸ್​​ ಸಚಿವರ ನಡುವೆ ಚರ್ಚೆಯಾಗಿದೆ ಎನ್ನಲಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಆರೋಪಿಸಿದ್ದಾರೆ.

ರಾಜ್ಯಪಾಲರ ಕ್ರಮವನ್ನು ಉಲ್ಲೇಖಿಸಿದ ಗೃಹ ಸಚಿವ ಜಿ ಪರಮೇಶ್ವರ ಅವರು, ಇದು ರಾಜಕೀಯ ಪ್ರೇರಿತ ಎಂದು ನಂಬಲು ಕಾರಣವಿದೆ. ಗೆಹ್ಲೋಟ್ ಅವರಿಗೆ ಕೆಲವು ಸಾಂವಿಧಾನಿಕ ಅಧಿಕಾರಗಳನ್ನು ನೀಡಲಾಗಿದೆ. ಅದರ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಅದು ಮಿತಿ ದಾಟಿದರೆ ಅದು ಅನುಮಾನಗಳಿಗೆ ಕಾರಣವಾಗುತ್ತದೆ. ಇದರಲ್ಲಿ ಏನೋ ರಾಜಕೀಯ ನಡೆಯುತ್ತಿದೆ ಎಂಬ ಶಂಕೆ ಇದೆ ಎಂದು ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

ಮುಂಡಾ ಪ್ರಕರಣ ಕುರಿತಾಗಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಪ್ರತಿಕ್ರಿಯೆ” ಕೇಳುತ್ತಿದ್ದಂತೆ ಕಾಂಗ್ರೆಸ್​​ನವರು ಕಾನೂನು ಹೋರಾಟಕ್ಕೆ ನಿರ್ಣಯ ಮಾಡಿದ್ದಾರೆ ಎನ್ನಲಾಗಿದೆ. ಸಚಿವರ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗಿದೆ.