ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ 50:50 ಅನುಪಾತದಡಿ ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಎರಡು ದಿನಗಳ ಸುದೀರ್ಘ ಶೋಧ ಕಾರ್ಯವನ್ನು ಭಾನುವಾರ ನಸುಕಿನ ಜಾವ 2.30ರ ಸುಮಾರಿಗೆ ಮುಕ್ತಾಯಗೊಳಿಸಿದ್ದಾರೆ. ಬಂಡಲುಗಟ್ಟಲೆ ದಾಖಲೆಗಳನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಮತ್ತು ಶನಿವಾರ ದಿನವಿಡೀ ಎಲ್ಲ ದಾಖಲೆಗಳನ್ನು ಜಾಲಾಡಿದ ಇಡಿ ಅಧಿಕಾರಿಗಳು, ಮಹತ್ವದ ದಾಖಲೆಗಳಗಳನ್ನೂ ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿ, ಸಿಆರ್‌ಪಿಎಫ್ ಸಿಬ್ಬಂದಿ ಭದ್ರತೆಯಲ್ಲಿ ಮುಡಾ ಸಿಬ್ಬಂದಿ ವಿಚಾರಣೆ ನಡೆಸಿದ್ದರು.
ಶನಿವಾರ ರಾತ್ರಿಯಿಡೀ ನಡೆದ ಕಾರ್ಯಾಚರಣೆಗೆ ಸಾಥ್ ನೀಡಿದ ಮುಡಾ ಸಿಬ್ಬಂದಿ, ಇಡಿ ಅಧಿಕಾರಿಗಳ ತಂಡ ಕೇಳಿದ ಎಲ್ಲ ದಾಖಲೆಗಳನ್ನು ನೀಡಿದ್ದಾರೆ. ಅವುಗಳನ್ನು ಕಲೆ ಹಾಕಿಕೊಂಡ ಅಧಿಕಾರಿಗಳು, ಹಾರ್ಡ್ ಡಿಸ್ಕ್ ಜತೆಗೆ 8 ಸಾವಿರ ಪುಟಗಳ ದಾಖಲೆಗಳು, ಜೆರಾಕ್ಸ್, ಮೂಲ ಪ್ರತಿಗಳನ್ನು ಸಿಆರ್‌ಪಿಎಫ್ ಪೊಲೀಸರ ಭದ್ರತೆಯಲ್ಲಿ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.
ಇಬ್ಬರು ತಜ್ಞರ ನೆರವಿನೊಂದಿಗೆ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಪಡೆದು ಅಲ್ಲೇ ಸ್ಕಾೃನ್ ಮಾಡಿಸಿ ಡಿಜಿಟಲ್ ರೂಪದಲ್ಲಿ ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದಾರೆ. ಎರಡು ದಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಚಾರಣೆ ನಡೆಸಿದ ಇಡಿ ತಂಡವು, ಕೆಸರೆ ಸರ್ವೇ ನಂ. 464ಕ್ಕೆ ಸಂಬಂಧಿಸಿದ ಪ್ರತಿ ಕಡತವನ್ನೂ ಪಡೆದುಕೊಂಡಿದೆ. ಮೂಲ ದಾಖಲೆಗಳೇ ನಾಪತ್ತೆಯಾಗಿರುವ ಬಗ್ಗೆ ಆಯುಕ್ತ ರಘುನಂದನ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿದೆ.
ಬದಲಿ ನಿವೇಶನ ಕೋರಿ ಪಾರ್ವತಿ ಅವರು ಮುಡಾಕ್ಕೆ ಸಲ್ಲಿಸಿದ್ದ ಅರ್ಜಿ, ನಂತರ ವೈಟ್ನರ್ ಹಚ್ಚಿ ತಿದ್ದುಪಡಿ ಮಾಡಲಾಗಿದೆ ಎನ್ನಲಾದ ಪತ್ರ ಕೂಡ ಇಡಿಗೆ ದೊರೆತಿದೆ ಎಂದು ತಿಳಿದು ಬಂದಿದೆ. 2ನೇ ಪುಟದಲ್ಲಿ ವೈಟ್ನರ್ ಹಾಕಿದ್ದ ಜಾಗದಲ್ಲಿ ಏನಿತ್ತು ಎಂಬುದರ ಕುರಿತು ತಜ್ಞರು ಸ್ಥಳದಲ್ಲೇ ಪರಿಶೀಲನೆ ಮಾಡಿದ್ದಾರೆ. ಇಬ್ಬರು ಪರಿಣಿತರಿದ್ದ ಎಫ್‌ಎಸ್‌ಎಲ್ ತಂಡವೂ ಪತ್ರದ ನೈಜತೆ ಪರಿಶೀಲಿಸಿದೆ ಎದು ಗೊತ್ತಾಗಿದೆ. 2004-05ರಲ್ಲಿ ಈ ಜಮೀನು ಮಲ್ಲಿಕಾರ್ಜುನ ಸ್ವಾಮಿಯವರಿಗೆ ನೋಂದಣಿಯಾಗುವ ಮುನ್ನ ಯಾರಿಗೆಲ್ಲ ನಿವೇಶನ ಹಂಚಿಕೆಯಾಗಿತ್ತು? ಹಂಚಿಕೆಯಾಗಿದ್ದರೂ ಕೃಷಿ ಜಮೀನು ಎಂದು ನೋಂದಣಿ ಮಾಡಿದ್ದು ಹೇಗೆ? ಎಂದು ಮುಡಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಸಿಎಂ ಕುಟುಂಬದ ಭೂ ಹಗರಣ ಪ್ರಕರಣದೊಂದಿಗೆ 2015ರಿಂದ 2024ರವರೆಗೆ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಯಾವ ಶಿಫಾರಸಿನ ಮೇಲೆ ನಿವೇಶನ ವಿತರಿಸಲಾಗಿದೆ? ಯಾವ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ? ಯಾರೆಲ್ಲ ಮುಡಾ ಸಾಮಾನ್ಯ ಸಭೆಯಲ್ಲಿದ್ದರು?
ಜನಪ್ರತಿನಿಧಿಗಳು ಪತ್ರ ನೀಡಿದ್ದರೇ? ಹಣದ ವಹಿವಾಟು ಏನಾದರೂ ನಡೆದಿತ್ತೇ ? ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಆಯುಕ್ತರ ಆದೇಶ ಪತ್ರಗಳು, ಮುಡಾದ ಆಡಳಿತಾಧಿಕಾರಿಯಾಗಿದ್ದ ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸರ್ಕಾರಕ್ಕೆ ಬರೆದಿದ್ದ ಪತ್ರಗಳು ಸಹ ಇಡಿ ತಂಡಕ್ಕೆ ದೊರೆತಿವೆ. ಅದನ್ನು ಆಧರಿಸಿ ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ.ದಿನೇಶ್‌ಕುಮಾರ್ ಹಾಗೂ ಡಿ.ಬಿ.ನಟೇಶ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ದಟ್ಟವಾಗಿದೆ.
ಈ ನಡುವೆ, ಮೈಸೂರು ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ತಡರಾತ್ರಿವರೆಗೂ ಶೋಧ ನಡೆಸಿದ್ದ ಇಡಿ ಅಧಿಕಾರಿಗಳ ತಂಡವು, ಅಂದಾಜು 100 ಪುಟದಷ್ಟು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ. ಕೆಸರೆ ಸರ್ವೇ ಸಂಖ್ಯೆ 464 ಹಾಗೂ 462ರ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದು, ಇದರೊಂದಿಗೆ ಮುಡಾ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಶೋಧ ಕಾರ್ಯಚರಣೆ ಕೊನೆಗೊಂಡಿದೆ. ಅಗತ್ಯ ಬಿದ್ದರೆ ಕೇಳುವ ದಾಖಲೆಗಳನ್ನು ನೀಡುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಎರಡು ದಿನಗಳ ಕಾಲ ಶೋಧ ಕಾರ್ಯದಿಂದ ಬಿರುಸಿನ ಚಟುವಟಿಕೆಗಳ ಕೇಂದ್ರವಾಗಿದ್ದ ಮುಡಾ ಆವರಣ ಭಾನುವಾರ ಬಿಕೋ ಎನ್ನುತ್ತಿತ್ತು. ಬೆಳಗಿನ ಜಾವ 2.30ಕ್ಕೆ ಕಾರ್ಯಾಚರಣೆ ಕೊನೆಗೊಳಿಸಿ ಇಡಿ ಅಧಿಕಾರಿಗಳು ಮುಡಾದಿಂದ ನಿರ್ಗಮಿಸಿದರು. ಭಾನುವಾರವಾದ ಕಾರಣಕ್ಕೆ ಮುಡಾ ಕಚೇರಿಗೆ ಬೀಗ ಹಾಕಲಾಗಿತ್ತು.