ಜಿಲ್ಲೆ

ಮೈಸೂರನ್ನು ಕೊಳಚೆ ಪ್ರದೇಶವನ್ನಾಗಿಸುತ್ತಿರುವ ಮುಡಾ : ಜಿ.ಟಿ. ದೇವೇಗೌಡ ಆಕ್ರೋಶ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ನಗರವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೊಳಚೆ ಪ್ರದೇಶವನ್ನಾಗಿಸುತ್ತಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಡಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮುಡಾ ಅಭಿವೃದ್ಧಿ ಪಡಿಸಿದ ಹಾಗೂ ಮುಡಾ ಅನುಮೋದಿತ ಖಾಸಗಿ ಬಡಾವಣೆಗಳ ಅಭಿವೃದ್ಧಿ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ಬಡಾವಣೆಗಳು ಅಭಿವೃದ್ಧಿ ವಂಚಿತವಾಗಿ ಕೊಳಚೆ ಪ್ರದೇಶಗಳಾಗಿ ಮಾರ್ಪಾಡು ಹೊಂದುತ್ತಿದ್ದು, ಆ ಮೂಲಕ ಮುಡಾ ನಗರದಲ್ಲಿ ಹೊಸ ಕೊಳಚೆ ಪ್ರದೇಶಗಳ ನಿರ್ಮಾಣಕ್ಕೆ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಡಾದಲ್ಲಿ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಸಭೆಯಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನಕ್ಕೆ ಬರುತ್ತಿಲ್ಲ. ಇನ್ನಾದರೂ ಹೊಸ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಮೈಸೂರು ನಗರ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಇದಕ್ಕೆ ಪೂರಕವಾಗಿ ನಗರದ ವಿವಿಧೆಡೆ ಬಹುಮಹಡಿ ವಾಹನ ನಿಲ್ದಾಣ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾ ಇಲ್ಲ. ಕೆರೆ ಅಭಿವೃದ್ಧಿಗೆ ಕೇವಲ 55 ಕೋಟಿ ರೂ. ಮೀಸಲಿರಿಸಲಾಗಿದ್ದು, ಈ ಹಣ ಎಲ್ಲಿಗೂ ಸಾಲುವುದಿಲ್ಲ. ನಗರದಲ್ಲಿ ಸಾಕಷ್ಟು ಕೆರೆಗಳು ಇದ್ದು ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿರಿಸ ಬೇಕು. ಮುಡಾ ನಿವೇಶನ ನೀಡುವ ಸಂದರ್ಭ ಮಾಜಿ ಸೈನಿಕರಿಗೆ ಆದ್ಯತೆಯ ಮೇರೆಗೆ ನಿವೇಶನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.