ಜಿಲ್ಲೆ

ಮುಡಾ ಖಾಸಗಿ ನಿವೇಶನದಾರರಿಗೂ ಎದುರಾದ ಸಂಕಷ್ಟ

ಆರ್.ಕೃಷ್ಣ

ಆರ್.ಕೃಷ್ಣ ಮೈಸೂರು
ಹಗರಣದಿಂದಾಗಿಯೇ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಈಗ ಖಾಸಗಿ ನಿವೇಶನದಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ತನ್ನ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡ ಖಾಸಗಿ ಬಡಾವಣೆಗಳಿಗೆ ಮುಡಾದಲ್ಲಿ ಮಾಡಿಕೊಡಲಾಗುತ್ತಿದ್ದ ಖಾತೆಗೆ ಈಗ ತಡೆ ಹಿಡಿಯಲಾಗಿದೆ. ಇದರಿಂದ ಖಾಸಗಿ ನಿವೇಶನದಾರರು ತಮ್ಮ ನಿವೇಶನಗಳನ್ನು ಮಾರಾಟ ಮಾಡಿದರೂ ಅದು ಮುಡಾದಲ್ಲಿ ಈಗ ಖಾತೆ ಆಗುತ್ತಿಲ್ಲ. ಇದು ನಿವೇಶನ ಕೊಂಡು ಮನೆ ನಿರ್ಮಿಸಬೇಕು ಅಥವಾ ಮಾರಾಟ ಮಾಡಬೇಕು ಎನ್ನುವವರಿಗೆ ಅಡ್ಡಿ ಉಂಟಾಗುತ್ತಿದೆ.
ಬಡಾವಣೆಗಳ ಅಭಿವೃದ್ಧಿಗೆ ಮುಡಾ ಅನುಮತಿ ನೀಡಬಹುದೇ ಹೊರತು, ಖಾತೆ ಮಾಡಿಕೊಡುವ ಅಧಿಕಾರ ಇಲ್ಲ. ಹಾಗೊಂದು ವೇಳೆ ಖಾತೆ ಮಾಡಿಕೊಟ್ಟರೆ ಅದು ಕಾನೂನುಬಾಹಿರ ಎನ್ನುವ ವಾದವನ್ನು ಈಗ ಮುಡಾ ಮುಂದಿಡುತ್ತಿದೆ.
ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ಹೊರತುಪಡಿಸಿ ಖಾಸಗಿ ಬಡಾವಣೆಗಳನ್ನು ಮುಡಾದಲ್ಲಿ ಖಾತೆ ಮಾಡಿಕೊಡಲು ಅವಕಾಶವಿಲ್ಲ. ಖಾಸಗಿ ಬಡಾವಣೆಗಳು ಯಾವ ವ್ಯಾಪ್ತಿಯಲ್ಲಿದೆಯೋ ಆಯಾಯ ಸ್ಥಳೀಯ ಸಂಸ್ಥೆಗಳಲ್ಲಿಯೇ ನೋಂದಣಿ ಮಾಡಿಸಬೇಕು ಎನ್ನುವ ನಿಯಮ ನಗರಾಭಿವೃದ್ಧಿ ಇಲಾಖೆಯ ಅಧಿನಿಯಮದಲ್ಲಿ ಇದೆ. ಹಾಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆಯಲ್ಲಿ ಖಾತೆ ನೋಂದಣಿ ಮಾಡಿಸಬೇಕಿದೆ.
ಈ ಹಿಂದೆ ಮುಡಾದಲ್ಲಿ ಅನುಮತಿ ಪಡೆದು ಅಭಿವೃದ್ಧಿಗೊಂಡ ಖಾಸಗಿ ಬಡಾವಣೆಗಳನ್ನು ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ ಬಳಿಕ ಮುಡಾದಲ್ಲಿಯೇ ಖಾತೆ ಮಾಡಿಕೊಡಲಾಗುತ್ತಿತ್ತು. ಕಂದಾಯವನ್ನು ಮುಡಾಕ್ಕೆ ಪಾವತಿಸಬೇಕಿತ್ತು. ಇದರಿಂದ ಮುಡಾಕ್ಕೆ ಆದಾಯವೂ ಬರುತ್ತಿತ್ತು.
ಆದರೆ ಮುಡಾ ಹಗರಣ ಬೆಳಕಿಗೆ ಬಂದ ಬಳಿಕ ನಗರಾಭಿವೃದ್ಧಿ ಇಲಾಖೆ, ಸರ್ಕಾರ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಹೀಗಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಆಯುಕ್ತ ರಘುನಂದನ್ ಅವರು ನಗರಾಭಿವೃದ್ಧಿ ಇಲಾಖೆಯ ನಿಯಮದಡಿ ಖಾಸಗಿ ಬಡಾವಣೆಗಳನ್ನು ಮುಡಾದಲ್ಲಿ ನೋಂದಣಿ ಮಾಡಲು ಅವಕಾಶವಿಲ್ಲ ಎಂದು ತಡೆ ನೀಡಿದ್ದಾರೆ. ಇದರಿಂದ ಖಾಸಗಿ ನಿವೇಶನದಾರರು ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಾಖಲೆಗಳು ಹಸ್ತಾಂತರಗೊಳ್ಳಬೇಕು:
ಮುಡಾದಲ್ಲಿ ಈಗ ಖಾತೆ ಮಾಡಿಸಲು ಸಾಧ್ಯವಿಲ್ಲದಿರುವುದರಿಂದ ಖಾಸಗಿ ಬಡಾವಣೆಗಳ ದಾಖಲೆಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳಬೇಕಿದೆ. ದಾಖಲೆ ಹಸ್ತಾಂತರಗೊಳ್ಳದ ಹೊರತು ಸ್ಥಳೀಯ ಸಂಸ್ಥೆಗಳಲ್ಲಿಯೂ ನೋಂದಣಿ ಕಷ್ಟವಾಗಿದೆ.
ಬಡಾವಣೆಗಳ ಅಭಿವೃದ್ಧಿಗೆ ಭೂ ಪರಿವರ್ತನೆ, ಬಡಾವಣೆ ನಕ್ಷೆ, ಉದ್ಯಾನ, ರಸ್ತೆ, ಸಿಎ ನಿವೇಶನ ಸೇರಿದಂತೆ ನಿಯಮದ ಪ್ರಕಾರ ಬಡಾವಣೆ ನಿರ್ಮಿಸಲಾಗಿದೆ ಎನ್ನುವುದನ್ನು ಗಮನಿಸಿ ಮುಡಾ ಖಾಸಗಿ ಬಡಾವಣೆಗಿಗೆ ಅನುಮತಿ ನೀಡಿರುತ್ತದೆ. ಬಳಿಕ ನೋಂದಣಿಯಾದ ಬಡಾವಣೆಗಳಿಗೆ ಖಾತೆ ಮಾಡಿಕೊಟ್ಟಿರುವುದರಿಂದ ಈ ಎಲ್ಲ ದಾಖಲೆಗಳು ಮುಡಾ ಬಳಿಯೇ ಇರುತ್ತವೆ.
ಹಾಗಾಗಿ ಖಾಸಗಿ ಬಡಾವಣೆಗಳು ಇರುವ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಗೆ ಹೋಗಿ ವಿಚಾರಿಸಿದರೆ ನಮ್ಮಲ್ಲಿ ದಾಖಲೆಗಳು ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಹೀಗಾಗಿ ನಿವೇಶನದಾರರು ಕಚೇರಿಯಿಂದ ಕಚೇರಿಗೆ ಅಲೆಯಬೇಕಿದೆ.
ಕಂದಾಯ, ಸಿಎ ನಿವೇಶನ ನೀಡಬೇಕು:
ಮುಡಾ ಅನುಮತಿ ನೀಡಿದ ಖಾಸಗಿ ಬಡಾವಣೆಗಳಲ್ಲಿ ಸಿಎ ನಿವೇಶನವನ್ನು ಮುಡಾವೇ ಪಡೆದು ಅದನ್ನು ಹರಾಜು ಹಾಕುತ್ತಿದೆ, ಅಲ್ಲದೇ ಕಂದಾಯವನ್ನು ಪಡೆಯುತ್ತಿದೆ. ಆದರೆ ಇನ್ನು ಮುಂದೆ ಕಂದಾಯ ಹಾಗೂ ಸಿಎ ನಿವೇಶನಗಳನ್ನು ನಮ್ಮ ವ್ಯಾಪ್ತಿಗೆ ನೀಡಬೇಕು ಎನ್ನುವ ವಾದವನ್ನು ಸ್ಥಳೀಯ ಸಂಸ್ಥೆಯವರು ಮುಂದಿಡುತ್ತಿದ್ದಾರೆ. ಇದರಿಂದ ಮುಂದೆ ಮುಡಾ ಹಾಗೂ ಸ್ಥಳೀಯ ಸಂಸ್ಥೆಗಳ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.
ಈ ಹಿಂದೆಯೂ ಸ್ಥಗಿತಗೊಂಡಿತ್ತು:
ಖಾಸಗಿ ಬಡಾವಣೆಗಳಿಗೆ ಮುಡಾ ಖಾತೆ ನೋಂದಣಿ ಮಾಡಿಕೊಡುವುದನ್ನು ಈ ಹಿಂದೆಯೂ ರದ್ದ್ದುಗೊಳಿಸಲಾಗಿತ್ತು. ಮುಡಾ ಅನುಮತಿ ಪಡೆದು ಅಭಿವೃದ್ಧಿಗೊಂಡಿದ್ದರೂ ಖಾತೆ ಮಾಡಲು ಸಾಧ್ಯವಿಲ್ಲ ಎಂದು ಹಿಂದೆಯೂ ಅಧಿಕಾರಿಗಳು ಹೇಳಿದ್ದರು. ಇದರಿಂದ ಖಾಸಗಿ ಬಡಾವಣೆಗಳ ನಿವೇಶನ ದರ ಕಡಿಮೆ ಆಗಿತ್ತು. ಹೀಗಾಗಿ ರಿಯಲ್ ಎಸ್ಟೇಟ್‌ನವರು, ನಿವೇಶನ ಮರು ಮಾರಾಟ ಮಾಡುವವರು ರಾಜಕಾರಣಿಗಳಿಗೆ ದುಂಬಾಲು ಬಿದ್ದು, ಮತ್ತೆ ಖಾತೆ ಮಾಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಈಗ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವುದರಿಂದ ಸರ್ಕಾರ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ತನ್ನ ವ್ಯಾಪ್ತಿಯನ್ನು ಮೀರಿ ಮುಡಾ ಕೆಲಸ ಮಾಡಿರುವುದು ಕಂಡುಬಂದರೆ ತಲೆಬಿಸಿಯಾಗಲಿದೆ ಎಂದು ಅಧಿಕಾರಿಗಳು ಕೈ ಚೆಲ್ಲುತ್ತಿದ್ದಾರೆ.

ಹೊರ ವಲಯದಲ್ಲಿಯೂ ಸಮಸ್ಯೆಯಾಗಿತ್ತು
ಮೈಸೂರು ನಗರದ ಹೊರ ವಲಯದಲ್ಲಿ ನೂತನವಾಗಿ ಆರಂಭಗೊಂಡ ಪಟ್ಟಣ ಪಂಚಾಯಿತಿ, ನಗರ ಸಭೆ ರಚನೆಯಿಂದ ಕೆಲ ವರ್ಷ ಖಾತೆ ನೋಂದಣಿ ಸಮಸ್ಯೆ ಉಂಟಾಗಿತ್ತು. ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿ ರಚನೆಗೊಂಡಾಗ ಮುಡಾ, ನಗರಪಾಲಿಕೆಗೆ ಪಾವತಿಸುತ್ತಿದ್ದ ಕಂದಾಯವನ್ನು ನೂತನ ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತು. ಆದರೆ ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳಿಗೆ ತೆರಳಿದಾಗ ನಮ್ಮಲ್ಲಿ ದಾಖಲೆಗಳು ಇಲ್ಲ ಎಂದು ವಾಪಸ್ ಕಳುಹಿಸುತ್ತಿದ್ದರಿಂದ ಹಲವು ವರ್ಷಗಳ ಕಾಲ ಖಾತೆ, ಕಂದಾಯ ವಿಷಯದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು.

ನಿಯಮದಲ್ಲಿ ಅವಕಾಶವಿಲ್ಲ
ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಬಡಾವಣೆ ನಿವೇಶನಗಳನ್ನು ಮಾತ್ರ ನಮ್ಮಲ್ಲಿ ಖಾತೆ ಮಾಡಿಸಲು ಅವಕಾಶವಿದೆ. ಮುಡಾ ಅನುಮತಿ ಪಡೆದು ಅಭಿವೃದ್ಧಿಗೊಂಡ ಬಡಾವಣೆ ನಿವೇಶನಗಳನ್ನು ನಮ್ಮಲ್ಲಿ ಖಾತೆ ಮಾಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಹಾಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಮಾಡಿಸಬೇಕು. ಶೀಘ್ರವೇ ದಾಖಲೆಗಳನ್ನು ಸಂಬಂಧಪಟ್ಟವರಿಗೆ ವರ್ಗಾಯಿಸಲಾಗುವುದು.
ಎ.ಎನ್.ರಘುನಂದನ್
ಆಯುಕ್ತರು, ಮುಡಾ