ಜಿಲ್ಲೆ

ಸಚಿವ ಬೈರತಿ ಮನೆ ಮೇಲೆ ದಾಳಿ ಮಾಡಿದರೆ ಸಿಗಲಿದೆ ಮುಡಾ ದಾಖಲೆಗಳು

ಮಂಜುನಾಥ ತಿಮ್ಮಯ್ಯ

ಮೈಸೂರು: ಮುಡಾದಿಂದ ಅಕ್ರಮವಾಗಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳಿಲ್ಲ. ಅವೆಲ್ಲ ಬೆಂಗಳೂರಿಗೆ ಹೋಗಿವೆ. ಹೀಗಾಗಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದರು.


50:50ರ ಅನುಪಾತದಡಿ ಹಂಚಿಕೆ ಆಗಿರುವ ನಿವೇಶನದ ಕಡತಗಳೂ ಬೆಂಗಳೂರು ತಲುಪಿವೆ. ಪ್ರಕರಣದಲ್ಲಿ ಶಾಮೀಲಾಗಿರುವವರು ಸಹ ಕೂಡಲೇ ಸಿಕ್ಕಿಹಾಕಿಕೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಅಕ್ರಮ ನಿವೇಶನ ಹಂಚಿಕೆಗೆ ಸಂಬಂಧಿಸಿದ ಮೂಲ ಕಡತಗಳು ಮುಡಾ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಸಿಕ್ಕಿಲ್ಲ. ವೈಟ್ನರ್ ಹಾಕಿದ ಕಡತಗಳೂ ನಾಪತ್ತೆಯಾಗಿವೆ. ಇನ್ನೂ ಹತ್ತು ಹಲವು ದಾಖಲೆ ದೊರೆಯುತ್ತಿಲ್ಲ ಎಂಬ ಮಾತಿದೆ. ಈ ಕುರಿತು ಯಾರ ಮೇಲೆ ಅನುಮಾನ ಇದೆಯೋ ಅವರೆಲ್ಲ ಮನೆಗಳ ಮೇಲೆಯೂ ದಾಳಿ ಮಾಡಿ ಇಡಿ ಅಧಿಕಾರಿಗಳು ಶೋಧಿಸಬೇಕು ಎಂದರು.


ಲೋಕಾಯುಕ್ತದ ಜಿಲ್ಲಾಮಟ್ಟ ಅಧಿಕಾರಿ ಸಿಎಂಗೆ ನೋಟಿಸ್ ನೀಡಿ ತನ್ನ ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಇಡಿ ತನಿಖೆ ನಡೆಸುತ್ತಿದ್ದು, ಇದು ನಿರೀಕ್ಷಿತವಾಗಿತ್ತು ಎಂದರು.


ಮುಡಾದಿಂದ 50:50ರ ಅನುಪಾತದಡಿ ಈ ವರೆಗೂ ಹಂಚಿಕೆ ಆಗಿರುವ ನಿವೇಶನ ಹಗರಣದಲ್ಲಿ ಮುಡಾ ಸದಸ್ಯರಾದ ಶಾಸಕರೂ ಶಾಮೀಲಾಗಿರುವ ಆರೋಪವಿದ್ದು, ಈ ಕುರಿತು ತನಿಖೆ ಮಾಡಿ ಎಂದೂ ಆಗ್ರಹಿಸಿದರು.

ಮುಡಾಕ್ಕೆ ಶಾಸಕರು ಸದಸ್ಯರಾಗುವುದು ಏಕೆ? ಇವರು ಏಕೆ ಬೇಕು? ಎಂಬ ಪ್ರಶ್ನೆಗಳಿವೆ. ಮಂಡ್ಯ, ಬೆಂಗಳೂರಿನ ವ್ಯಾಪ್ತಿಯ ಶಾಸಕರು ತಮ್ಮ ವಿಳಾಸವನ್ನು ಆಧಾರ್ ಕಾರ್ಡ್‌ನಲ್ಲಿ ಬದಲಿಸಿಕೊಂಡು ಮುಡಾ ಸದಸ್ಯರಾಗಿದ್ದಾರೆ. ಪ್ರತಿ ಮುಡಾ ಸಾಮಾನ್ಯ ಸಭೆಯಲ್ಲಿ ಲೇಔಟ್ ನಿರ್ಮಿಸಿರುವ ರಿಯಲ್ ಎಸ್ಟೇಟ್ ಬಿಲ್ಡರ್ ಪರ ವಾಗ್ವಾದಗಳು ಆಗಿವೆ. ಇದು ಅನುಮಾನ ಮೂಡಿಸುತ್ತದೆ. ಹೀಗಾಗಿ, ಮುಡಾಕ್ಕೆ ಶಾಸಕರ ಸದಸ್ಯತ್ವ ತೆಗೆದುಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೋಕಸಭಾ ಚುನಾವಣೆ ವೇಳೆ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಹೀಗಾಗಿ, ಕಾಂಗ್ರೆಸ್ ಸಂಸದರಾದ ಇ.ತುಕಾರಾಂ, ಜಿ.ಕುಮಾರ್‌ನಾಯಕ್ ಅವರನ್ನು ಅನರ್ಹಗೊಳಿಸಬೇಕು. ಈ ಬಗ್ಗೆ ಅ.22ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ವತಿಯಿಂದ ಲಿಖಿತ ದೂರು ನೀಡಲಾಗುವುದು.ಎಂ.ಜಿ. ಮಹೇಶ್, ಬಿಜೆಪಿ ರಾಜ್ಯ ವಕ್ತಾರ